ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ತೀವ್ರವಾಗಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರಧಾನಿಯವರ ಚುನಾವಣಾ ಘೋಷಣೆಯಾದ “ಅಬ್ ಕೀ ಬಾರ್ ಎಕ್ಯೂಐ ಚಾರ್ ಸೋ ಪಾರ್” (ಈ ಬಾರಿ 400ಕ್ಕಿಂತ ಹೆಚ್ಚು) ಅನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಕನಿಷ್ಠ ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕದ (AQI) ವಿಚಾರದಲ್ಲಾದರೂ ಈ ಘೋಷಣೆ ನಿಜವಾಗಿದೆ ಎಂದು ವ್ಯಂಗ್ಯವಾಡಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಧಾನಿಯವರನ್ನು ಟೀಕಿಸಿದ್ದಾರೆ. ದೆಹಲಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ವರದಿಗಳನ್ನು ಉಲ್ಲೇಖಿಸಿರುವ ಅವರು, “ಅಬ್ ಕೀ ಬಾರ್, ಎಕ್ಯೂಐ ಚಾರ್ ಸೋ ಪಾರ್ (ಈ ಬಾರಿ ಎಕ್ಯೂಐ 400 ದಾಟಿದೆ). ಎಕ್ಯೂಐ ವಿಚಾರದಲ್ಲಾದರೂ ‘ಪ್ರವಚನಮಂತ್ರಿ’ಗಳ ಘೋಷಣೆ ನಿಜವಾಗುತ್ತಿದೆ!” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಳಕಿನ ಹಬ್ಬಕ್ಕೆ ಮಾಲಿನ್ಯದ ಕತ್ತಲು; ದೆಹಲಿ ಜನ ಪಾಠ ಕಲಿಯುವುದು ಯಾವಾಗ?
“ದೆಹಲಿ ವಿಶ್ವದ ಅತ್ಯಂತ ಕಲುಷಿತ ನಗರವಾಗಿ ಮಾರ್ಪಟ್ಟಿದೆ. ಗಾಳಿಯು ಎಷ್ಟು ವಿಷಕಾರಿಯಾಗಿದೆಯೆಂದರೆ ಉಸಿರಾಡುವುದೇ ಕಷ್ಟಕರವಾಗಿದೆ. ಮಕ್ಕಳು ಮತ್ತು ವೃದ್ಧರು ಇದಕ್ಕೆ ಅತಿ ದೊಡ್ಡ ಬೆಲೆ ತೆರುತ್ತಿದ್ದಾರೆ. ಉಸಿರಾಟದ ಸಮಸ್ಯೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆಯೂ ಏರಿಕೆಯಾಗುತ್ತಿದೆ. ಅಂದು ಗಾಳಿಯಲ್ಲಿ ಘೋಷಣೆಗಳನ್ನು ತೇಲಿಬಿಡಲಾಗಿತ್ತು, ಇಂದು ಗಾಳಿಯೇ ವಿಷವಾಗಿ ಬದಲಾಗಿದೆ” ಎಂದು ರಮೇಶ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ 400ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಿಸುವಂತೆ ಪ್ರಧಾನಿ ಮೋದಿ ಈ ಘೋಷಣೆ ನೀಡಿದ್ದರು.
ಕಳೆದ ಕೆಲವು ದಿನಗಳಿಂದ ದೆಹಲಿಯ ಹಲವು ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ ಎಕ್ಯೂಐ ಮಟ್ಟವು ‘ತೀವ್ರ’ (Severe – 400 ರಿಂದ 500) ವಿಭಾಗದಲ್ಲಿ ದಾಖಲಾಗುತ್ತಿದ್ದು, ಶುಕ್ರವಾರ ನಗರದ ಸರಾಸರಿ ಎಕ್ಯೂಐ 400ರ ಗಡಿಯನ್ನು ದಾಟಿದೆ.
ಮತ್ತೊಂದೆಡೆ, ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಶನಿವಾರ ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ್ದಾರೆ.
ವಾಯುಮಾಲಿನ್ಯಕ್ಕೆ ರಾಜ್ಯಗಳ ಗಡಿಗಳಿಲ್ಲ ಎಂದು ಹೇಳಿರುವ ಸಚಿವರು, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ನಿಯಮಗಳನ್ನು ಪಾಲಿಸಲು ಮತ್ತು ವಾರಕ್ಕೊಮ್ಮೆ ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ (CAQM) ವರದಿ ಸಲ್ಲಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸುವಂತೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದ್ದಾರೆ.



