ಹಳಿಯಾಳ: ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ನಿವೃತ್ತ ಸೈನಿಕನೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುರ್ಗನಗರ ನಿವಾಸಿ ಹಾಗೂ ನಿವೃತ್ತ ಸೈನಿಕ ವಿಷ್ಣು ಮಹಾಬಳೇಶ್ವರ ಶಿರೋಡಕರ್ (40) ಅವರು ನೀಡಿದ ದೂರಿನ ಮೇರೆಗೆ, ಹಳಿಯಾಳದ ಕೆ.ಎಚ್.ಬಿ. ಕಾಲೋನಿಯ ನಿವಾಸಿಗಳಾದ ಸಣ್ಣನಿಂಗಪ್ಪ ಅರ್ಜುನ ಶೆಟ್ಟಣ್ಣನವರ (58), ಕಿರಣ ಸಣ್ಣನಿಂಗಪ್ಪ ಶೆಟ್ಟಣ್ಣನವರ (36) ಮತ್ತು ಮಂಜುನಾಥ ಸಣ್ಣನಿಂಗಪ್ಪ ಶೆಟ್ಟಣ್ಣನವರ (34) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಆರೋಪಿಗಳು ಸರ್ಕಾರಿ ಇಲಾಖೆಗಳಲ್ಲಿ ತಮ್ಮ ಪ್ರಭಾವವಿದೆ ಎಂದು ಹೇಳಿಕೊಂಡು ಪಿಎಸ್‌ಐ ಹುದ್ದೆ ದೊರಕಿಸಿಕೊಡುವ ಭರವಸೆ ನೀಡಿದ್ದರು ಇವರ ಮಾತನ್ನು ನಂಬಿದ ವಿಷ್ಣು ಶಿರೋಡಕರ್ ಅವರು ವಿವಿಧ ಹಂತಗಳಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿದ್ದಾರೆ, ಜೊತೆಗೆ ಆನ್‌ಲೈನ್ ಮೂಲಕವೂ ಹಣ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಜೂನ್ 20ರಿಂದ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ; 12.30 ಲಕ್ಷ ಮತದಾರರ ವಿವರಗಳ ಮರುಪರಿಶೀಲನೆ
ಒಟ್ಟು ₹18.90 ಲಕ್ಷ ಹಣವನ್ನು ಆರೋಪಿಗಳಿಗೆ ನೀಡಲಾಗಿದ್ದು, ಬಳಿಕ ಉದ್ಯೋಗ ಕೊಡಿಸುವಲ್ಲಿ ವಿಳಂಬ ಮಾಡಿದ್ದಾರೆ. ಇದರಿಂದ ಅನುಮಾನಗೊಂಡ ವಿಷ್ಣು ಶಿರೋಡಕರ ಅವರು ಹಣವನ್ನು ಮರಳಿ ನೀಡುವಂತೆ ಹಲವು ಬಾರಿ ಒತ್ತಾಯಿಸಿದ್ದಾರೆ ನಂತರ ಆರೋಪಿಗಳು ₹7,08,500 ಮೊತ್ತವನ್ನು ಮಾತ್ರ ಹಿಂದಿರುಗಿಸಿದ್ದು, ಉಳಿದ ಹಣವನ್ನು ಕೊಟ್ಟಿರುವುದಿಲ್ಲ.
ಇದೇ ವಿಚಾರವಾಗಿ ಕಳೆದ ಏಪ್ರಿಲ್ 10ರಂದು ಹಣದ ಬಗ್ಗೆ ಪ್ರಶ್ನಿಸಿದ ಸಂದರ್ಭದಲ್ಲಿ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ವಂಚನೆ, ನಂಬಿಕೆ ದ್ರೋಹ ಹಾಗೂ ಬೆದರಿಕೆ ಸಂಬಂಧಿತ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕರಿಗೆ ಎಚ್ಚರಿಕೆ ಸರ್ಕಾರಿ ಉದ್ಯೋಗ, ಪೊಲೀಸ್ ನೇಮಕಾತಿ ಅಥವಾ ಇತರ ಸರ್ಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ಹೇಳಿ ಹಣದ ಬೇಡಿಕೆ ಇಡುವ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಯಾವುದೇ ನೇಮಕಾತಿ ಪ್ರಕ್ರಿಯೆ ಅಧಿಕೃತ ಮಾರ್ಗಗಳ ಮೂಲಕವೇ ನಡೆಯುವುದರಿಂದ, ಉದ್ಯೋಗದ ಭರವಸೆಯ ಹೆಸರಿನಲ್ಲಿ ಹಣ ಪಾವತಿಸುವ ಮೊದಲು ಸೂಕ್ತ ಪರಿಶೀಲನೆ ನಡೆಸುವುದು ಅಗತ್ಯವಾಗಿದೆ.




