ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಮಲೆನಾಡು ಪ್ರದೇಶಗಳಲ್ಲಿರುವ ಹೆದ್ದಾರಿ, ರೈಲು ಮಾರ್ಗಗಳಲ್ಲಿ ಗುಡ್ಡ ಕುಸಿತಗಳು ಸಂಭವಿಸುತ್ತಲೇ ಇವೆ. ಇದೀಗ, ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ಬಳಿ ರೈಲ್ವೇ ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಪರಿಣಾಮ, ಬೆಂಗಳೂರು-ಮಂಗಳೂರು ನಡುವಿನ ರೈಲು ಸಂಚಾರ ಸ್ಥಗಿತಗೊಂಡಿದೆ.
ಶುಕ್ರವಾರ ರಾತ್ರಿ ಗುಡ್ಡ ಕುಸಿದಿದ್ದು, ರೈಲ್ವೇ ಸಿಬ್ಬಂದಿಗಳು ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. ತಾತ್ಕಾಲಿಕವಾಗಿ ರೈಲು ಸಂಚಾರ ಸ್ಥಗಿತಗೊಂಡಿದೆ. ಈ ಹಿಂದೆ, ಸಕಲೇಶಪುರ ಬಳಿಯ ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿದಿತ್ತು. ಆಗಲೂ, ಮೂರು ದಿನಗಳ ಕಾಲ ರೈಲು ಸಂಚಾರ ಸ್ಥಗಿತವಾಗಿತ್ತು. ಕೆಲ ರೈಲುಗಳ ಮಾರ್ಗ ಬಲದಾವಣೆ ಮಾಡಲಾಗಿತ್ತು. ಇದೀಗ, ಮತ್ತೆ ರೈಲು ಸಂಚಾರಕ್ಕೆ ಅಡ್ಡಿಯಾಗಿದೆ.
ಹಾಸನ, ಸಕಲೇಶಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬೆಂಗಳೂರು-ಕಣ್ಣೂರು, ಬೆಂಗಳೂರು-ಮುರುಡೇಶ್ವರ ಮತ್ತು ಹಾಸನ-ಮಂಗಳೂರು ರೈಲುಗಳ ಸಂಚಾರ ಬಂದ್ ಆಗಿದೆ. ರೈಲುಗಳು ಸ್ಥಗಿತವಾಗಿರುವುದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಶುಕ್ರವಾರ ರಾತ್ರಿ ಸಂಚರಿಸುತ್ತಿದ್ದ ರೈಲುಗಳು ಮಾರ್ಗ ಮಧ್ಯೆಯೇ ನಿಂತಿದ್ದರಿಂದ, ರೈಲ್ವೇ ಅಧಿಕಾರಿಗಳು ಪ್ರಯಾಣಿಕರಿಗೆ ಪರ್ಯಾಯ ವಾಹನ ವ್ಯವಸ್ಥೆ ಮಾಡಿ, ಕಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಪಶ್ಚಿಮ ಘಟ್ಟಗಳ ಸಂರಕ್ಷಣೆ: ಅಭಿವೃದ್ಧಿ v/s ಪರಿಸರ – ಯಾವುದು ಮುಖ್ಯ
ಈ ಹಿಂದೆ, ಸಕಲೇಶಪುರ ತಾಲೂಕಿನ ದೋಣಿಗಲ್ (ಶಿರಾಡಿ ಘಾಟ್) ಬಳಿ ಗುಡ್ಡ ಕುಸಿತವಾಗಿತ್ತು. ಆ ರಾತ್ರಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೇರಳ ಮಾರ್ಗವಾಗಿ ಮಂಗಳೂರು ತಲುಪುವಂತಾಗಿತ್ತು. ಇನ್ನು, ಶಿರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದ್ದರಿಂದ ಕೆಲ ವಾಹನಗಳು ನದಿಗೆ ಬಿದಿದ್ದವು. ದುರ್ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಅವರಲ್ಲಿ, ಈವರೆಗೆ ಮೂರು ಮಂದಿಯ ಮೃತದೇಹ ಪತ್ತೆಯಾಗಿಲ್ಲ.
ಅಲ್ಲದೆ, ಕೇರಳದ ವಯನಾಡ್‌ನಲ್ಲಿ ಭೀಕರ ಭೂಕುಸಿತದಿಂದ 300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. 250ಕ್ಕೂ ಹೆಚ್ಚು ಮಂದಿ ಇನ್ನೂ ಪತ್ತೆಯಾಗಿಲ್ಲ. ನೂರಾರು ಕುಟುಂಬಗಳು ಮನೆ-ಆಸ್ತಿ ಕಳೆದುಕೊಂಡಿದ್ದು, ನಿರಾಶ್ರಿತರಾಗಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಕೇರಳ ಸರ್ಕಾರ, ಕರ್ನಾಟಕ ಸರ್ಕಾರ ಹಾಗೂ ಕಾಂಗ್ರೆಸ್ ತಲಾ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಘೋಷಿಸಿವೆ.