ಹಾಸನ, ಸೆ. 23: ಸ್ವಾತಂತ್ರ್ಯ ಚಳವಳಿಯ ಧ್ರುವತಾರೆ, ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ ಜನ್ಮದಿನದ ಅಂಗವಾಗಿ ‘ನಾನೇಕೆ ನಾಸ್ತಿಕ’ ಎಂಬ ಆಶಯದೊಂದಿಗೆ ಮೂರನೇ ರಾಜ್ಯಮಟ್ಟದ ವೈಚಾರಿಕ ಸಂವಾದ ಸಮಾವೇಶವನ್ನು ಸೆಪ್ಟೆಂಬರ್ 27ರ ಭಾನುವಾರ ಹಾಸನದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಭಗತ್ ಸಿಂಗ್ ಜನ್ಮದಿನಾಚರಣಾ ಸಮಿತಿ ತಿಳಿಸಿದೆ.
ಈ ಕುರಿತು ಹಾಸನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಅವರು, ವಿವಿಧ ಪ್ರಗತಿಪರ, ದಲಿತಪರ ಹಾಗೂ ಜನಪರ ಸಂಘಟನೆಗಳು ಒಟ್ಟಾಗಿ ಭಗತ್ ಸಿಂಗ್ ಅವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ಹೇಳಿದರು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಪ್ರತಿವರ್ಷ ರಾಜ್ಯಮಟ್ಟದ ‘ನಾನೇಕೆ ನಾಸ್ತಿಕ’ ವೈಚಾರಿಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿ ಮೂರನೇ ರಾಜ್ಯಮಟ್ಟದ ಸಮಾವೇಶವನ್ನು ಹಾಸನದಲ್ಲಿ ನಡೆಸಲಾಗುತ್ತಿದೆ. ಭಗತ್ ಸಿಂಗ್ ಅವರ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ಸಮಾಜವಾದಿ ಚಿಂತನೆ ಹಾಗೂ ಸಮಾನತೆಯ ಸಮಾಜದ ಕುರಿತ ಅವರ ಆಶಯಗಳನ್ನು ಇಂದಿನ ವಿದ್ಯಾರ್ಥಿ-ಯುವಜನರಿಗೆ ಪರಿಚಯಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿವಿಧ ವಿಚಾರಗೋಷ್ಠಿ, ಸಂವಾದ ಮತ್ತು ಪುಸ್ತಕ ಬಿಡುಗಡೆ:
ಸೆಪ್ಟೆಂಬರ್ 27ರಂದು ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ನಡೆಯಲಿರುವ ಸಮಾವೇಶವನ್ನು ಪ್ರೊ. ರಾಜಪ್ಪ ದಳವಾಯಿ ಅವರು ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ಅಧ್ಯಕ್ಷ ನರೇಂದ್ರ ನಾಯಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಲಾಯಿತು.
ಸಮಾವೇಶದಲ್ಲಿ ‘ಭಾರತದ ಮರೆಮಾಚಿದ ನಾಸ್ತಿಕತೆ ಇತಿಹಾಸ’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ ‘ನಾಸ್ತಿಕತೆ ಎಂದರೇನು?’, ‘ಭಾರತದಲ್ಲಿ ನಾಸ್ತಿಕತೆಯ ಇತಿಹಾಸ’ ಸೇರಿದಂತೆ ಹಲವು ವಿಷಯಗಳ ಕುರಿತು ವಿಚಾರಗೋಷ್ಠಿಗಳು ಹಾಗೂ ಸಂವಾದಗಳು ನಡೆಯಲಿವೆ.
ವೈದ್ಯರು, ಮನೋವೈದ್ಯರು ಹಾಗೂ ವಿವಿಧ ಕ್ಷೇತ್ರಗಳ ತಜ್ಞರೊಂದಿಗೆ ವಿದ್ಯಾರ್ಥಿ-ಯುವಜನರ ಸಂವಾದಕ್ಕೂ ಅವಕಾಶ ಕಲ್ಪಿಸಲಾಗಿದೆ. ಭಾರತದಲ್ಲಿ ನಾಸ್ತಿಕತೆಯ ಚಿಂತನೆಯ ಐತಿಹಾಸಿಕ ಬೆಳವಣಿಗೆಯ ಕುರಿತು ಡಾ. ಬಿ.ಆರ್. ಮಂಜುನಾಥ್ ಅವರು ವಿಶೇಷ ಉಪನ್ಯಾಸ ಮತ್ತು ಸಂವಾದ ನಡೆಸಿಕೊಡಲಿದ್ದಾರೆ ಎಂದು ಆಯೋಜಕರು ತಿಳಿಸಿದರು.
ವಿದ್ಯಾರ್ಥಿಗಳಿಗಾಗಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆ:
ವಿದ್ಯಾರ್ಥಿ-ಯುವಜನರಲ್ಲಿ ಭಗತ್ ಸಿಂಗ್ ಅವರ ವಿಚಾರಧಾರೆ ಹಾಗೂ ವೈಚಾರಿಕ ಚಿಂತನೆಗಳನ್ನು ಪರಿಚಯಿಸುವ ಉದ್ದೇಶದಿಂದ ಈಗಾಗಲೇ ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆಗಳನ್ನು ನಡೆಸಲಾಗಿದೆ. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸಮಾವೇಶದ ಸಂದರ್ಭದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗುವುದು ಹಾಗೆಯೇ, ದಿನವಿಡೀ ನಡೆಯುವ ಕಾರ್ಯಕ್ರಮವು ಸಾಂಪ್ರದಾಯಿಕ ಏಕಮುಖ ಭಾಷಣಕ್ಕಿಂತ ಸಂವಾದ ಮತ್ತು ಚರ್ಚೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ವೈಜ್ಞಾನಿಕ ಚಿಂತನೆ, ಭಗತ್ ಸಿಂಗ್ ಅವರ ವಿಚಾರಗಳು, ನಾಸ್ತಿಕತೆ, ಮಾನವೀಯತೆ, ಸಮಾನತೆ ಹಾಗೂ ಸಮಕಾಲೀನ ಸಾಮಾಜಿಕ ಸಮಸ್ಯೆಗಳ ಕುರಿತು ಚಿಂತನ-ಮಂಥನ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ವಿದ್ಯಾರ್ಥಿ-ಯುವಜನರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ:
ಸಮಾವೇಶದಲ್ಲಿ ಭಾಗವಹಿಸಲು ಆನ್‌ಲೈನ್ ನೋಂದಣಿ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲಾ-ಕಾಲೇಜುಗಳಿಗೂ ನೋಂದಣಿ ಅರ್ಜಿಗಳನ್ನು ಕಳುಹಿಸಲಾಗಿದ್ದು, ವಿದ್ಯಾರ್ಥಿ-ಯುವಜನರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಆಯೋಜಕರು ಮನವಿ ಮಾಡಿದರು.
ಇದನ್ನೂ ಓದಿದ್ದೀರಾ?ಹಾಸನ |‘ನಾಸ್ತಿಕತೆ ಎಂದರೆ ಧರ್ಮವಿರೋಧವಲ್ಲ’; ಸಿಪಿಐಎಂ ಧರ್ಮೇಶ್
ಕಾರ್ಯಕ್ರಮದ ವ್ಯವಸ್ಥಿತ ನಿರ್ವಹಣೆಗೆ ಆನ್‌ಲೈನ್ ನೋಂದಣಿ ಮಾಡಲಾಗುತ್ತಿದ್ದು, ಅಂದು ಬೆಳಗ್ಗೆ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮಕ್ಕೆ ಭಾಗವಹಿಸುವವರು ನೋಂದಣಿ ಮಾಡಿಕೊಳ್ಳಬಹುದು ಸಂಖ್ಯೆಯನ್ನು ಮುಂಚಿತವಾಗಿ ತಿಳಿದುಕೊಂಡು ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದು ಧರ್ಮೇಶ್ ವಿವರಿಸಿದರು




