ಮಾರುಕಟ್ಟೆಯ ಏರಿಳಿತಗಳಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾಫಿ ಬೆಳೆಗಾರರ ಬಗ್ಗೆ ಕೇಂದ್ರ ಸರ್ಕಾರದ ಉದಾಸೀನ ಮನೋಭಾವಕ್ಕೆ ಕಾಫಿ ಬೆಳೆಗಾರರ ಒಕ್ಕೂಟ (CFFI) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಕಾಫಿ ಬೆಲೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ.
ಬೆಲೆ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಮಾರ್ಚ್-ಏಪ್ರಿಲ್ 2025 ರಲ್ಲಿ ರೋಬಸ್ಟಾ ಚೆರ್ರಿ ಕಾಫಿ ಬೆಲೆ ಪ್ರತಿ ಕೆಜಿಗೆ 260 ರಿಂದ 280 ರೂ. ಇತ್ತು. ಪ್ರಸ್ತುತ ಇದು 180 ರಿಂದ 205 ರೂ.ಗಳ ನಡುವೆ ಏರಿಳಿತವಾಗುತ್ತಿದೆ. ಅದೇ ರೀತಿ, ಅರೆಬಿಕಾ ಚೆರ್ರಿ ಬೆಲೆಯು ಮಾರ್ಚ್-ಏಪ್ರಿಲ್ 2025 ರಲ್ಲಿ 300 ರೂ. ಇದ್ದದ್ದು, ಮಾರ್ಚ್ 2026 ರಲ್ಲಿ 260 ರೂ.ಗೆ ಕುಸಿದಿದೆ. ಹಲವು ವರ್ಷಗಳ ಕಡಿಮೆ ಬೆಲೆಯ ನಂತರ, ಕಳೆದ ವರ್ಷ ಉತ್ತಮ ಬೆಲೆ ಸಿಕ್ಕಿದ್ದರಿಂದ ರೈತರಲ್ಲಿ ಆತ್ಮವಿಶ್ವಾಸ ಮೂಡಿತ್ತು. ಇದರಿಂದಾಗಿ ರೈತರು ಬ್ಯಾಂಕುಗಳು ಮತ್ತು ಖಾಸಗಿ ಮೂಲಗಳಿಂದ ಸಾಲ ಪಡೆದು ತೋಟಗಳ ಮೇಲೆ ಹೆಚ್ಚಿನ ಹೂಡಿಕೆ ಮಾಡಿದ್ದರು. ಕಾಫಿ ಬೆಳೆಗಾರರಲ್ಲಿ ಹೆಚ್ಚಿನವರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರುವುದು ಅವರ ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಆದ್ದರಿಂದ, ಮೋದಿ ಸರ್ಕಾರ ಮತ್ತು ಕಾಫಿ ಮಂಡಳಿಯು ಕೂಡಲೇ ಮಧ್ಯಪ್ರವೇಶಿಸಿ, ರೋಬಸ್ಟಾ ಕಾಫಿಗೆ ಕನಿಷ್ಠ 250 ರೂ. ಮತ್ತು ಅರೆಬಿಕಾ ಡ್ರೈ ಚೆರ್ರಿಗೆ 300 ರೂ. ಬೆಲೆಯನ್ನು ಖಾತರಿಪಡಿಸಿ ಖರೀದಿ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು CFFI ಒತ್ತಾಯಿಸಿದೆ.
ಪ್ರಸ್ತುತ ಜಾಗತಿಕ ರಾಜಕೀಯ ಪರಿಸ್ಥಿತಿ—ವಿಶೇಷವಾಗಿ ಇರಾನ್ ಮೇಲಿನ ಸಾಮ್ರಾಜ್ಯಶಾಹಿ ಯುದ್ಧವು—ಸಾರಿಗೆ ವ್ಯವಸ್ಥೆಯನ್ನು ತೀವ್ರವಾಗಿ ಅಸ್ತವ್ಯಸ್ತಗೊಳಿಸಿದೆ. ಇದರಿಂದಾಗಿ ರೈತರ ಉತ್ಪನ್ನಗಳನ್ನು ಖರೀದಿಸಲು ಮಾರುಕಟ್ಟೆಯಲ್ಲಿ ಖರೀದಿದಾರರಿಲ್ಲದಂತಾಗಿದೆ. ಭಾರತೀಯ ಕಾಫಿ ರಫ್ತುದಾರರ ಸಂಘದಂತಹ ಸಂಸ್ಥೆಗಳ ವರದಿಗಳ ಪ್ರಕಾರ, ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಪಶ್ಚಿಮ ಏಷ್ಯಾದ ಮಾರುಕಟ್ಟೆಗಳಿಗೆ ಹೋಗಬೇಕಿದ್ದ ಸುಮಾರು 300 ಕಂಟೈನರ್ ಭಾರತೀಯ ಕಾಫಿ ಬಂದರುಗಳಲ್ಲಿ ಬಾಕಿ ಉಳಿದಿವೆ ಅಥವಾ ಹಾರ್ಮುಜ್ ಜಲಸಂಧಿಯ ಮೂಲಕ ಬಹಳ ನಿಧಾನವಾಗಿ ಚಲಿಸುತ್ತಿವೆ. ಇದರಿಂದ ವಿಮೆ, ಕಂಟೈನರ್ ವಿತರಣೆ ಮತ್ತು ಸರಕು ಸಾಗಣೆ ವೆಚ್ಚಗಳು ಗಗನಕ್ಕೇರಿವೆ. ಕೆಲವು ಯುರೋಪಿಯನ್ ಖರೀದಿದಾರರು ಹಡಗುಗಳನ್ನು ‘ಕೇಪ್ ಆಫ್ ಗುಡ್ ಹೋಪ್’ ಮೂಲಕ ದೀರ್ಘ ಮತ್ತು ದುಬಾರಿ ಮಾರ್ಗದಲ್ಲಿ ಮರುನಿರ್ದೇಶಿಸುತ್ತಿದ್ದಾರೆ. ಇದರ ನೇರ ಪರಿಣಾಮವಾಗಿ ರೈತರಿಂದ ಕಾಫಿ ಖರೀದಿ ಸ್ಥಗಿತಗೊಂಡಿದೆ. ಅರಕು ಅಂತಹ ಕಾಫಿ ಪ್ರದೇಶಗಳಲ್ಲಿ ಗಿರಿಜನ ಸಹಕಾರ ನಿಗಮ (GCC) ಮತ್ತು ಸಮಗ್ರ ಬುಡಕಟ್ಟು ಅಭಿವೃದ್ಧಿ ಸಂಸ್ಥೆ (ITDA) ಸೇರಿದಂತೆ ಸರ್ಕಾರಿ ಏಜೆನ್ಸಿಗಳು ಕೂಡ ಖರೀದಿ ಸ್ಥಗಿತಗೊಳಿಸಿರುವುದರಿಂದ ಆದಿವಾಸಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಾಗತಿಕ ಹಣಕಾಸು ವ್ಯವಸ್ಥೆಯೊಂದಿಗೆ ಬೆರೆತಿರುವ ಕೆಲವು ಬಹುರಾಷ್ಟ್ರೀಯ ಕಂಪನಿಗಳು ಕಾಫಿ ಸಂಸ್ಕರಣೆ ಮತ್ತು ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದ್ದು, ಲಾಭದ ಹೆಚ್ಚಿನ ಪಾಲನ್ನು ತಮ್ಮದಾಗಿಸಿಕೊಳ್ಳುತ್ತಿವೆ; ಆದರೆ ಉತ್ಪಾದಕ ರೈತರು ಮಾತ್ರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು CFFI ಹಲವು ಬಾರಿ ಎತ್ತಿ ತೋರಿಸಿದೆ. ರೈತರೇ ಕಾಫಿ ಬೆಳೆಯುವುದು, ಸಂಸ್ಕರಣೆ, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಲು ಪೂರಕವಾದ ಬೃಹತ್ ಸಹಕಾರಿ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ರೂಪಿಸಬೇಕು.
ಇದನ್ನೂ ಓದಿದ್ದೀರಾ?ಹಾಸನ | ಮಾ. 23ರಿಂದ ಏಪ್ರಿಲ್ 5ರವರೆಗೆ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವ
ಅಂತರಾಷ್ಟ್ರೀಯ ಅನುಭವಗಳು ತೋರಿಸುವಂತೆ, ಸುಸಂಘಟಿತ ಸಹಕಾರಿ ಪ್ರಯೋಗಗಳು ರೈತರ ಶೋಷಣೆಯನ್ನು ತಡೆಯಬಲ್ಲವು. ಕಾಫಿ ವಲಯದಲ್ಲಿ ರೈತ ಸಹಕಾರ ಸಂಘಗಳ ರಚನೆಗೆ ಬಲವಾದ ಶಿಫಾರಸು ಮಾಡಿದ್ದ ಸಂಸದೀಯ ಉಪಸಮಿತಿಯ “ನೂರ ಎರಡನೇ ವರದಿ”ಯನ್ನು (One Hundred Second Report) ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. 2014 ರವರೆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ-2 ಸರ್ಕಾರವಾಗಲಿ ಅಥವಾ ಕಳೆದ 11 ವರ್ಷಗಳ ಬಿಜೆಪಿ ನೇತೃತ್ವದ ಮೋದಿ ಸರ್ಕಾರವಾಗಲಿ ಈ ಪ್ರಮುಖ ವರದಿಯ ಮೇಲೆ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ವ್ಯಕ್ತಪಡಿಸಿದ್ದಾರೆ. ಈ ವೇಳೆ ಪಿ. ಕೃಷ್ಣಪ್ರಸಾದ್, ಪ್ರಧಾನ ಕಾರ್ಯದರ್ಶಿ ಎಚ್. ಆರ್. ನವೀನ್ ಕುಮಾರ್ ಇದ್ದರು.
ಇಮೇಲ್: [email protected] ಸಂಪರ್ಕ: 9448702074, 9447125209




