ಹಾವೇರಿ ಜಿಲ್ಲೆಯಲ್ಲಿ ಶಾಸಕರ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ. ಮಳೆ ಕೊರತೆ ಹಿನ್ನೆಲೆಯಲ್ಲಿ 6 ಶಾಸಕರು ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಜುಲೈ 7ರಿಂದ 3 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡರ ಮಾಲೀಕತ್ವದ ವಿಶೇಷ ವಿಮಾನದಿಂದ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತದೆ. ಮಂಗಳವಾರದಿಂದ ಮೋಡ ಬಿತ್ತನೆ ಮಾಡಲಿದ್ದು, ಗಂಟೆಗೆ 15 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಈ ವೆಚ್ಚವನ್ನು ಹಾವೇರಿ ಜಿಲ್ಲೆಯ ಶಾಸಕರು ಭರಿಸಲಿದ್ದಾರೆ.
ಉತ್ತರ ಕರ್ನಾಟಕದ ಧಾರವಾಡ ಸೇರಿದಂತೆ ಸುತ್ತಲಿನ ಜಿಲ್ಲೆಗಳಲ್ಲಿ ಮಳೆ ಕೊರತೆ ಉಂಟಾಗಿರುವುದರಿಂದ, ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿ ಮೋಡ ಬಿತ್ತನೆ ಕಾರ್ಯ ಕೈಗೊಳ್ಳಬೇಕು ಎಂದು ಈ ಭಾಗದ ರೈತರು ಆಗ್ರಹಿಸಿದ್ದರು.
ಸರ್ಕಾರ ರಾಜ್ಯದ ಒಟ್ಟಾರೆ ಮಳೆ ಕೊರತೆ ಹಾಗೂ ಬರ ಸ್ಥಿತಿಯನ್ನು ಅವಲೋಕಿಸಿದ ನಂತರ ಮೋಡ ಬಿತ್ತನೆಯ ಕುರಿತು ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿತ್ತು.




