ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಅಧಿಕಾರಿಗಳು ಮಾನವೀಯತೆ ಹಾಗೂ ತುರ್ತು ಸ್ಪಂದನೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಆರೋಗ್ಯ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಕೃತಿ ವಿಕೋಪ ಪೂರ್ವಸಿದ್ಧತಾ ಸಭೆ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಳೆ, ಗಾಳಿ ಸೇರಿದಂತೆ ಯಾವುದೇ ಪ್ರಕೃತಿ ವಿಕೋಪದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಾಹಿತಿ ನೀಡುತ್ತಾ, ಜಿಲ್ಲಾಡಳಿತದ ಪ್ರಕೃತಿ ವಿಕೋಪ ಪರಿಹಾರ ಖಾತೆಯಲ್ಲಿ ₹61 ಕೋಟಿ ಲಭ್ಯವಿದ್ದು, ಜಿಲ್ಲೆಯ ಪ್ರತಿಯೊಂದು ತಾಲೂಕಿಗೂ ತುರ್ತು ಪರಿಸ್ಥಿತಿ ನಿರ್ವಹಣೆಗೆ ₹30 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಯು.ಟಿ. ಖಾದರ್, ಮಳೆಯಿಂದ ಮನೆಗಳಿಗೆ ಹಾನಿಯಾಗಿರುವ ಕುಟುಂಬಗಳಿಗೆ ಸರ್ಕಾರದ ವತಿಯಿಂದ ನೀಡಲಾಗುವ ₹5,000 ತುರ್ತು ನೆರವನ್ನು ಯಾವುದೇ ವಿಳಂಬವಿಲ್ಲದೆ ವಿತರಿಸಬೇಕು ಎಂದು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮಳೆಯ ಅಬ್ಬರ: ದೇವಿಮನೆ ಘಟ್ಟದಲ್ಲಿ ಭೂಕುಸಿತ, ಹಾರವಾಡದಲ್ಲಿ ಕಡಲ ಕೊರೆತ ತೀವ್ರ
This video cannot be played in your browser. Open the video directly
ಈ ಪ್ರಕ್ರಿಯೆಯಲ್ಲಿ ಗ್ರಾಮ ಆಡಳಿತಾಧಿಕಾರಿ (ವಿ.ಎ.) ಅಥವಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ನಿರ್ಲಕ್ಷ್ಯ ಅಥವಾ ವಿಳಂಬ ತೋರಿದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಕೃತಿ ವಿಕೋಪ ಪರಿಹಾರದ ಕುರಿತು ಮಾತನಾಡಿದ ಸಚಿವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF) ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಸ್ವತಂತ್ರವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪೂರ್ಣ ಮನೆ ಕುಸಿದರೆ ಒಟ್ಟು ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಮೊದಲ ಹಂತದಲ್ಲಿ ₹1.20 ಲಕ್ಷ ಬಿಡುಗಡೆ ಮಾಡಲಾಗುತ್ತಿದ್ದು, ಬಳಿಕ ಮನೆ ನಿರ್ಮಾಣದ ಪ್ರಗತಿಯನ್ನು ಪರಿಶೀಲಿಸಿ ಉಳಿದ ಮೊತ್ತವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ವ್ಯವಸ್ಥೆ ಇದೆ ಎಂದು ವಿವರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ್ ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲು ಅಗತ್ಯ ಕ್ರಮಗಳ ಕುರಿತು ಸಚಿವರ ಗಮನಕ್ಕೆ ಹಲವು ಸಲಹೆಗಳನ್ನು ತಂದರು. ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಮಾತನಾಡಿ, ಜಿಲ್ಲೆಯಲ್ಲಿ ಪೂರ್ವ ಮುಂಗಾರು ಉತ್ತಮವಾಗಿದ್ದರೂ ಪ್ರಸಕ್ತ ಮುಂಗಾರು ಅವಧಿಯಲ್ಲಿ ಶೇ.37ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದರು.
ವಿಶೇಷವಾಗಿ ಘಟ್ಟ ಪ್ರದೇಶಗಳಲ್ಲಿ ಮಳೆಯ ಕೊರತೆ ಕಂಡುಬಂದಿದ್ದು, ಕಳೆದ ನಾಲ್ಕು ದಿನಗಳಿಂದ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ ಎಂದು ಹೇಳಿದರು. ಜೂನ್ ತಿಂಗಳಲ್ಲಿ ಘಟ್ಟ ಪ್ರದೇಶದ 65 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗಿದೆ. ಅಗತ್ಯವಿದ್ದರೆ ಮುಂದೆಯೂ ತುರ್ತು ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ರಸ್ತೆ, ವಿದ್ಯುತ್, ಕುಡಿಯುವ ನೀರು, ಆರೋಗ್ಯ ಸೇವೆ, ಆಶ್ರಯ ಕೇಂದ್ರಗಳು ಸೇರಿದಂತೆ ಮಳೆಗಾಲದ ವಿಪತ್ತು ನಿರ್ವಹಣೆಗೆ ಕೈಗೊಂಡಿರುವ ಸಿದ್ಧತೆಗಳ ಕುರಿತು ಮಾಹಿತಿ ನೀಡಿದರು. ಯಾವುದೇ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಸಚಿವ ಯು.ಟಿ. ಖಾದರ್ ಸೂಚಿಸಿದರು.





