“ಇಂದಿನ ಯಾಂತ್ರಿಕ ಬದುಕಿನಲ್ಲಿ ಯುವಜನಾಂಗವು ಸೃಜನಶೀಲತೆಯನ್ನು ಹುಟ್ಟು ಹಾಕಲು ರಂಗಭೂಮಿಯಿಂದ ಸಾಧ್ಯ. ಪ್ರಜಾಪ್ರಭುತ್ವದ ಎಲ್ಲ ಮೌಲ್ಯಗಳನ್ನು ಸದಾಕಾಲ ಜನರಿಗೆ ಮುಟ್ಟಿಸುವ ಏಕೈಕ ಬಲಿಷ್ಠ ಮಾಧ್ಯಮ ರಂಗಭೂಮಿಯಾಗಿದೆ” ಹಾವೇರಿ ವಿವಿ ಆಡಳಿತ ಕುಲಸಚಿವರು ಡಾ. ಎಸ್.ಟಿ. ಬಾಗಲಕೋಟಿ ಹೆಳಿದರು.
ಹಾವೇರಿ ಪಟ್ಟಣದ ಕೆ.ಎಲ್.ಇ ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯ ಸಭಾ ಭವನದಲ್ಲಿ ಜಿಲ್ಲಾ ಕಲಾಬಳಗ ಕನ್ನಡ ವಿಭಾಗ ಹಾಗೂ ಸಾಹಿತ್ಯ ವೇದಿಕೆಯ ಐಕ್ಯೂಎಸಿ ವಿಭಾಗ ಜಂಟಿಯಾಗಿ ಏರ್ಪಡಿಸಿದ್ದ ವಿಶ್ವರಂಗಭೂಮಿ ದಿನಾಚರಣೆ ಅಂಗವಾಗಿ ಒಂದು ದಿನದ ವಿಚಾರ ಸಂಕಿರಣ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕೆ.ಎಲ್.ಇ ಆಡಳಿತ ಮಂಡಳಿ ನಿರ್ದೇಶಕರು ಎಂ. ಸಿ. ಕೊಳ್ಳಿ ಅವರು ಮಾತನಾಡಿ, “ರಂಗಭೂಮಿಯು ಸದಾಕಾಲ ಒಳ್ಳೆಯ ವಿಚಾರಗಳನ್ನು, ದೇಶಪ್ರೇಮ, ಜೀವನ ಪ್ರೀತಿ ಗಡಿಮೀರಿದ ಮೌಲ್ಯಗಳನ್ನು ಹೇಳುತ್ತ ಬಂದಿದೆ. ರಂಗಭೂಮಿ ಜೀವನ ಪಾಠಶಾಲೆ” ಎಂದರು.

ಮುಖ್ಯ ಅತಿಥಿ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಲಿಂಗಯ್ಯ ಹಿರೇಮಠ ಅವರು ಮಾತನಾಡಿ, “ರಂಗಭೂಮಿ ಆಸಕ್ತಿ ಕಡಿಮೆಯಾಗುತ್ತಿರುವುದಕ್ಕೆ ಸಾಮಾಜಿಕ ಜಾಲ ತಾಣಗಳ ಬಳಕೆ ಕಾರಣವಾಗಿದೆ. ರಂಗ ಚಟುವಟಿಕೆಗಳು ಹೆಚ್ಚಾದರೆ, ಈ ಗೀಳನ್ನು ಕಡಿಮೆ ಮಾಡಬಹುದು” ಎಂದರು.
ಜಿಲ್ಲಾ ಕಲಾ ಬಳಗದ ಸಂಚಾಲಕರು ಕೆ.ಆರ್. ಹಿರೇಮಠ ಅವರು ಮಾತನಾಡಿ, “ಅನೇಕ ನಾಟಕದ ಹೆಸರುಗಳೇ ಕ್ರೌರ್ಯವನ್ನು ಪ್ರತಿಪಾದಿಸುವಂತಿವೆ. ಒಳ್ಳೆಯ ನಾಟಕಗಳು ಕಡಿಮೆಯಾಗುತ್ತಿರುವ ಇಂದಿನ ದಿನಗಳಲ್ಲಿ ಜೀವನಾದರ್ಶ ಬಿಂಬಿಸುವ ನಾಟಕಗಳು ಬೇಕು” ಎಂದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರು ‘ಇಂದಿನ ರಂಗಭೂಮಿ ಸುತ್ತ ಒಂದ ಅವಲೋಕನ’ ಎಂಬ ವಿಷಯ ಕುರಿತು ವಿಚಾರಗಳನ್ನು ಮಂಡಿಸಿದರು. ಕುಮಾರಿ ನಾಗವೇಣಿ ಪಾಟೀಲ ಮತ್ತು ಸಂಧ್ಯಾ ಎನ್ ಕುಲಕರ್ಣಿ ರಂಗಭೂಮಿ ಅಂದು ಇಂದು ಮತ್ತು ಅದರ ಸವಾಲುಗಳು ಕುರಿತು ವಿಚಾರಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಾವು ಬಂತು ಹಾವು ಮತ್ತು ಯುದ್ಧ ಯುದ್ಧ ಎಂಬ ಎರಡು ಕಿರು ನಾಟಕಗಳನ್ನು ಜಿಲ್ಲಾ ಕಲಾಬಳಗದ ತಂಡದವರು ಅಭಿನಯಿಸಿದರು.
ಈ ಸಂದರ್ಭಲ್ಲಿ ರಂಗಭೂಮಿಗೆ ಅನನ್ಯ ಸೇವೆ ಸಲ್ಲಿಸಿದ ಆರು ಜನ ಹಿರಿಯರರು ಸರ್ವಶ್ರೀ ನಾಗರಾಜ ಬಣಕಾರ, ಶಂಕರಲಿಂಗಯ್ಯ ಬಸಲಿಂಗಯ್ಯ ಹಿರೇಮಠ, ಈರಣ್ಣ ಬೆಳವಡಿ, ಜಗದೀಶ ಚೌಟಗಿ, ಜಮೀರ ರಿತ್ತಿ, ಎ.ಬಿ. ಗುಡ್ಡಳ್ಳಿ ಇವರ ಜೊತೆಗೆ ಯುವ ಪ್ರತಿಭೆಗಳು ಕುಮಾರಿ ಪ್ರಿಯಾ ರೊಟ್ಟಿ, ಶ್ರೀಮತಿ ಮಧು ಎಂ, ತುಂಗಾ ಅನುರಾಧೇಶ್ವರ ಶಿವಲಿಂಗಯ್ಯ, ಸಹನಾ ಮನ್ವಾಚಾರ್, ಲಕ್ಷ್ಮೀ ಜಾಡರ ಹಾಗೂ ಪೂಜಾ ಯತ್ನಳ್ಳಿ ಅವರುಗಳಿಗೂ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ವೇದಿಕೆ ಮೇಲೆ ಹಿಮ್ಸ್ ಆಡಳಿತ ಸದಸ್ಯರು ಶಂಕರ ಸುತಾರ, ಐಕ್ಯೂಎಸಿ ಸಂಯೋಜಕಿ ಪ್ರೊ. ರೂಪಾ ಕೋರೆ, ಇನ್ನೋರ್ವ ಸಂಚಾಲಕ ಡಾ. ಶಮಂತಕುಮಾರ ಕೆ.ಎಸ್. ಮುಂತಾದವರಿದ್ದರು. ಆರಂಭದಲ್ಲಿ ಪ್ರಾಚಾರ್ಯರಾದ ಎಂ.ಎಂ. ಹೊಳ್ಳಿಯವರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರು ಡಾ. ಸಂಜೀವ ಆರ್. ನಾಯಕ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಸಾಹಿತ್ಯ ವೇದಿಕೆಯ ಸಂಚಾಲಕಿ ಪ್ರೊ. ಶ್ರೀದೇವಿ ದೊಡ್ಡಮನಿ ನಡೆಸಿಕೊಟ್ಟರು.



