- ಪಾಲಿಕೆ ಇತಿಹಾಸದಲ್ಲಿಯೇ ಅತೀ ದೊಡ್ಡ ಗಾತ್ರದ ಬಜೆಟ್
- ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ
ವಿಧಾನಸಭೆ ಚುನಾವಣೆ ಮೇಲೆ ಸ್ಥಳೀಯ ಆಡಳಿತ ಸಂಸ್ಥೆಗಳ ಪ್ರಭಾವವೂ ಹೆಚ್ಚಿರುತ್ತದೆ. ಹೀಗಾಗಿ, ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯತಿಗಳು , ಪಟ್ಟಣಗಳಲ್ಲಿ ಪುರಸಭೆ, ನಗರಸಭೆ, ಪಾಲಿಕೆಗಳು ಮೈಕೊಡವಿಕೊಂಡು ಕೆಲಸ ಮಾಡಲು ಆರಂಭಿಸಿವೆ. ಈ ನಡುವೆ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ತನ್ನ 2023-24ನೇ ಸಾಲಿನ ಬಜೆಟ್ ಮಂಡಿಸಿದೆ. 1,138.46 ಕೋಟಿ ರೂ. ಮೊತ್ತದ 8 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದ್ದು, ಜನರ ಮನೆ ಬಾಗಿಲಿಗೆ ಆಡಳಿತ ಒದಗಿಸುತ್ತೇವೆಂದು ಘೋಷಿಸಿದೆ.
ರಾಜ್ಯದ 2ನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹಿರಿಮೆ ಹೊತ್ತಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಡಳಿತ ಚುಕ್ಕಾಣಿ ಬಿಜೆಪಿ ಕೈಯಲ್ಲಿದೆ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಮೆಣಸಿನಕಾಯಿ ಅವರು ಬಜೆಟ್ ಮಂಡಿಸಿದ್ದಾರೆ.
ಕಳೆದ ವರ್ಷ 831 ಕೋಟಿ ರೂ. ಗಾತ್ರದ ಆಯವ್ಯಯ ಮಂಡಿಸಲಾಗಿತ್ತು. ಈ ವರ್ಷ 1 ಸಾವಿರ ಕೋಟಿ ರೂ. ಮೀರಿದ ಬಜೆಟ್ ಮಂಡಿಸಲಾಗಿದ್ದು, ಇದು ಹುಬ್ಬಳ್ಳಿ-ಧಾರವಾಡ ಪಾಲಿಕೆ ಇತಿಹಾಸದಲ್ಲಿ ಅತೀ ದೊಡ್ಡ ಗಾತ್ರದ ಬಜೆಟ್ ಎನ್ನಲಾಗಿದೆ. ಬಜೆಟ್‌ನಲ್ಲಿ ವಾಣಿಜ್ಯ ವಹಿವಾಟಿನ ಸಂಬಂಧ ನಾಗರಿಕರ ಮೇಲೆ ಅಲ್ಪ ಪ್ರಮಾಣದ ಹೊಸತೆರಿಗೆಯ ಭಾರ ಹೊರಿಸಲಾಗಿದೆ.
ತಮ್ಮ ಬಜೆಟ್‌ನಲ್ಲಿ ಮೂಲಸೌಕರ್ಯಗಳ ಉನ್ನತೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸರ್ಕಾರದ ನಿರೀಕ್ಷಿತ ಅನುದಾನ, ತೆರಿಗೆ, ತೆರಿಗೆಯೇತರ ಆದಾಯ, ಬಾಡಿಗೆ, ಸ್ವತ್ತುಗಳ ಮಾರಾಟದಿಂದ ಬಂದ ಆದಾಯದಿಂದ 1,138.54 ಕೋಟಿ ರೂ. ಆದಾಯ ನಿರೀಕ್ಷೆಯಲ್ಲಿ 1,138.46 ಕೋಟಿ ರೂ. ವೆಚ್ಚದ ಬಜೆಟ್ ಮಂಡಿಸಿರುವುದಾಗಿ ಹೇಳಿದ್ದಾರೆ.
ಪಾಲಿಕೆಯು ಈ ವರ್ಷ 663 ಕೋಟಿ ರೂ. ಆದಾಯದ ನಿರೀಕ್ಷೆ ಇಟ್ಟುಕೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ 464.65 ಕೋಟಿ ರೂ ಅನುದಾನದ ಪಾಲನ್ನು ಪಡೆಯುತ್ತಿದೆ. ಇದಷ್ಟೆ ಅಲ್ಲದೇ ಕಟ್ಟಡ ಪರವಾನಿಗೆ, ವಿನ್ಯಾಸಗಳ ಹಸ್ತಾಂತರ, ಒನ್ ಟೈಮ್ ಕಟ್ಟಡ ಮುಕ್ತಾಯ ಪ್ರಮಾಣ ಪತ್ರ ವಿತರಣೆ ಮೂಲಕ 32.68 ಕೋಟಿ ರೂ. ಆದಾಯ ಸಂಗ್ರಹಿಸುವ ಗುರಿಯನ್ನು ಇಟ್ಟುಕೊಂಡಿದೆ.
ಅವಳಿ ನಗರದ ಪ್ರತಿ ವಾರ್ಡ್ ಅಭಿವೃದ್ಧಿಗೆ 75 ಲಕ್ಷ ರೂ. ಹಾಗೂ ಪಾಲಿಕೆ ವ್ಯಾಪ್ತಿಯ 51 ಹಳ್ಳಿಗಳ ಅಭಿವೃದ್ಧಿಗೆ 5 ಕೋಟಿ ರೂ. ಮೀಸಲಿರಿಸಲಾಗಿದ್ದು, ಪೌರ ಕಾರ್ಮಿಕರು ಮತ್ತು ಆಟೋ ಟಿಪ್ಪರ್ ಚಾಲಕರಿಗೆ ಗುಂಪು ಆರೋಗ್ಯ ವಿಮೆ ನೀಡಲು ನಿರ್ಧರಿಸಿದೆ. ಪಾಲಿಕೆಯ ಆಸ್ತಿ ಸಂಗ್ರಹಣೆ ಸರಳೀಕರಣಗೊಳಿಸುವ ಪ್ರಸ್ತಾವನೆ ಇಟ್ಟುಕೊಂಡಿದ್ದು, ಪ್ರಸಕ್ತ ವರ್ಷದ ಏಪ್ರಿಲ್‌ನಿಂದಲೇ ಜಾರಿಗೊಳಿಸಿರುವುದಾಗಿ ತಿಳಿಸಿದ್ದಾರೆ.
ಕಡತ ವಿಲೆವಾರಿಗಳ ವಿಳಂಬ ನೀತಿ ತಪ್ಪಿಸಲು ‘ಕಂದಾಯ ಕಡತ ಯಜ್ಞ’ ಯೋಜನೆ ಜಾರಿಗೊಳಿಸಲಾಗಿದ್ದು, ಮಹಿಳೆಯರಿಗಾಗಿ ಧಾರವಾಡ ಹಾಗೂ ಹುಬ್ಬಳ್ಳಿಯ ಮಾರುಕಟ್ಟೆ ಪ್ರದೇಶದಲ್ಲಿ ಪಿಂಕ್ ಶೌಚಾಲಯ ನಿರ್ಮಾಣದ ವಿಶೇಷ ಯೋಜನೆಗೆ 1 ಕೋಟಿ ರೂ. ಮೀಸಲಿರಿಸಲಾಗಿದೆ.
ಜನಸಾಮಾನ್ಯರ ಮನಗೆಲ್ಲಲು ತೀರ್ಮಾನಿಸಲಾಗಿದ್ದು, ಆದಾಯ ಹೆಚ್ಚಳಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಅಧಿಕಾರಿಗಳ ಕಾರ್ಯದ ಗುಣಾತ್ಮಕ ಪರಿವರ್ತನೆ ಮನೋಭಾವ ಬೆಳೆಸುವ ಉದ್ದೇಶದಿಂದ ತೆರಿಗೆ ಸಂಗ್ರಹ ಹೆಚ್ಚಿಸುವ ಅಧಿಕಾರಿಗಳಿಗೆ 25 ಸಾವಿರ ರೂ. ನಗದಿನೊಂದಿಗೆ ‘ಸದ್ಗುರು ಸಿದ್ಧಾರೂಢ ಸೇವಾ ಪ್ರಶಸ್ತಿ’ ನೀಡಲು ನಿರ್ಧರಿಸಲಾಗಿದೆ.
ವಾರ್ಡ್ ಅಭಿವೃದ್ಧಿಗೆ ಪ್ರತಿ ಸದಸ್ಯರಿಗೆ 75 ಲಕ್ಷ, ನಾಮನಿರ್ದೇಶಿತ 5 ಸದಸ್ಯರಿಗೆ 25 ಲಕ್ಷ ರೂ, ಮೇಯರ್‌ಗೆ 3 ಕೋಟಿ ರೂ., ಉಪಮೇಯರ್‌ಗೆ 1.5 ಕೋಟಿ ರೂ. ಹಾಗೂ ಪಾಲಿಕೆ ಆಯುಕ್ತರಿಗೆ 5 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ.
ವಿಶೇಷ ನೇಮಕಾತಿಯಡಿ ಪೌರ ಕಾರ್ಮಿಕರ ನೇಮಕಕ್ಕೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದ್ದು, 134 ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ತಾತ್ಕಾಲಿಕ ನೇಮಕಾತಿ ಪಟ್ಟಿ ಹೊರಡಿಸಲಾಗಿದೆ. ಉಳಿದ 206 ಪೌರಕಾರ್ಮಿಕರ ಖಾಯಂಗೆ ಕ್ರಮ ಕೈಗೊಳ್ಳುವ ಕುರಿತು ಪ್ರಸ್ತಾಪಿಸಲಾಗಿದೆ.