ರಾಹುಲ್‌ ಲೋಕಸಭೆ ಸದಸ್ಯತ್ವ ಅನರ್ಹತೆ | ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಪ್ರತಿಪಕ್ಷಗಳು

Date:

ಭ್ರಷ್ಟರನ್ನು ಟೀಕಿಸುತ್ತಾ ‘ಮೋದಿ’ ಸರ್‌ನೇಮ್ ಉಲ್ಲೇಖಿಸಿದ ಮಾನಹಾನಿ ಪ್ರಕರಣದಲ್ಲಿ ಸೂರತ್‌ ನ್ಯಾಯಾಲಯದಿಂದ ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಶುಕ್ರವಾರ (ಮಾರ್ಚ್ 24) ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಈ ಬೆಳವಣಿಗೆ ಪ್ರಜಾಪ್ರಭುತ್ವದ ಕಗ್ಗೊಲೆ, ಸಂವಿಧಾನದ ಕುಸಿತ ಮೊದಲಾಗಿ ವಿಶ್ಲೇಷಿಸಿ ಪ್ರತಿಪಕ್ಷಗಳ ನಾಯಕರು ಖಂಡಿಸಿದ್ದಾರೆ.

ಪ್ರಜಾಪ್ರಭುತ್ವ ಕುಸಿತಕ್ಕೆ ಸಾಕ್ಷಿ

ರಾಹುಲ್‌ ಗಾಂಧಿ ಅವರನ್ನು ಲೋಕಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿರುವ ಕ್ರಮವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಖಂಡಿಸಿದ್ದಾರೆ.

“ಇದು ಪ್ರಧಾನಿಯ ನವಭಾರತ. ವಿಪಕ್ಷ ನಾಯಕರು ಬಿಜೆಪಿಯ ಪ್ರಮುಖ ಗುರಿಯಾಗಿದೆ. ಅಪರಾಧಿ ಹಿನ್ನೆಲೆಯ ಬಿಜೆಪಿ ನಾಯಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ, ವಿಪಕ್ಷ ನಾಯಕರನ್ನು ತಮ್ಮ ಹೇಳಿಕೆಗಾಗಿ ಅನರ್ಹಗೊಳಿಸಲಾಗುತ್ತಿದೆ. ಇಂದು ಸಾಂವಿಧಾನಿಕ ಪ್ರಜಾಪ್ರಭುತ್ವದ ಹೊಸ ಕುಸಿತಕ್ಕೆ ದೇಶವು ಸಾಕ್ಷಿಯಾಗಿದೆ” ಎಂದು ಟೀಕಿಸಿದ್ದಾರೆ.

ರಾಹುಲ್‌ ಅನರ್ಹತೆ ಹೇಡಿತನದ ಕೃತ್ಯ

ರಾಹುಲ್‌ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ರಾಹುಲ್‌ ಅವರ ಅನರ್ಹತೆ ಬಗ್ಗೆ ಕಿಡಿಕಾರಿದ್ದಾರೆ.

ದೆಹಲಿ ವಿಧಾನಸಭೆಯ ನಂತರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಹುಲ್‌ ಗಾಂಧಿ ಅವರನ್ನು ಅನರ್ಹಗೊಳಿಸಿರುವುದು ಹೇಡಿತನದ ಕೃತ್ಯ. ಇದು ಭಯಪಡುವ ಸರ್ಕಾರ. ಅವರು (ಬಿಜೆಪಿ) ದೇಶದಲ್ಲಿ ಒಂದೇ ಪಕ್ಷ ಇರಬೇಕು, ಒಬ್ಬನೇ ನಾಯಕ ಇರಬೇಕು ಎಂಬ ವಾತಾವರಣ ಸೃಷ್ಟಿಸಲು ಹೊರಟಿದ್ದಾರೆ” ಎಂದು ಅರವಿಂದ್‌ ಕೇಜ್ರಿವಾಲ್‌ ಕಿಡಿಕಾರಿದರು.

“ನಮ್ಮ ಪೂರ್ವಜರು ಭಾರತ ಹಾಗೂ ನಮ್ಮನ್ನು ಬ್ರಿಟಿಷರಿಂದ ರಕ್ಷಿಸಲು ಹೋರಾಡಿದರು. ಆದರೆ ಇಂದಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬ್ರಿಟಿಷರಿಗಿಂತ ಅಪಾಯಕಾರಿ. ದೇಶವನ್ನು ಉಳಿಸಲು ಕೇಂದ್ರ ಸರ್ಕಾರದ ವಿರುದ್ಧ ಎಲ್ಲರೂ ಹೋರಾಡಬೇಕಿದೆ” ಎಂದು ಕೇಜ್ರಿವಾಲ್‌ ಹೇಳಿದರು.

ಪ್ರಜಾಪ್ರಭುತ್ವದ ಕಗ್ಗೊಲೆ

ರಾಹುಲ್‌ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅರ್ಹಗೊಳಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಇದು ಸರ್ವಾಧಿಕಾರದ ಅಂತ್ಯದ ಆರಂಭ ಎಂದು ಶಿವಸೇನಾ (ಉದ್ಧವ್ ಬಾಳಾಠಾಕ್ರೆ ಬಣ) ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಕೆಲವರು ದೇಶವನ್ನು ಲೂಟಿ ಮಾಡುತ್ತಿರುವಾಗ, ಕಳ್ಳರನ್ನು ಕಳ್ಳ ಎನ್ನುವುದು ತಪ್ಪೇ ಎಂದು ಉದ್ಧವ್‌ ಪ್ರಶ್ನಿಸಿದ್ದಾರೆ.

“ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಎಲ್ಲ ಸಂಸ್ಥೆಗಳೂ ಒತ್ತಡದಲ್ಲಿವೆ. ಇದು ಸರ್ವಾಧಿಕಾರದ ಅಂತ್ಯದ ಆರಂಭ. ಈ ಹೋರಾಟವು ಸರಿಯಾದ ದಿಕ್ಕಿನಲ್ಲಿ ಸಾಗಬೇಕಿದೆ” ಎಂದು ಅವರು ಹೇಳಿದ್ದಾರೆ.

ಅಂತಿಮ ದಿನ ದೂರವಿಲ್ಲ

ಸಿಪಿಐ(ಎಂ) ಸಂಸದ ಜಾನ್ ಬ್ರಿಟಾಸ್ ಟ್ವೀಟ್ ಮಾಡಿ, “ಸಂಸತ್ತಿನಲ್ಲಿಯೇ ವ್ಯವಹಾರ ಕಳಪೆಯಾಗಿರುವಾಗ ರಾಹುಲ್ ಗಾಂಧಿ ಅವರನ್ನು ಮಿಂಚಿನ ವೇಗದಲ್ಲಿ ಅನರ್ಹಗೊಳಿಸಿರುವುದು ಅಚ್ಚರಿಯೇನಲ್ಲ. ಪ್ರಜಾಪ್ರಭುತ್ವದ ಅಂತಿಮ ದಿನಗಳು ಬಹಳ ದೂರವಿಲ್ಲ” ಎಂದು ಟೀಕಿಸಿದ್ದಾರೆ.

ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿ, “ರಾಹುಲ್ ಗಾಂಧಿ ವಿರುದ್ಧ ಸೇಡಿನ ಮತ್ತು ನಾಚಿಕೆಗೇಡಿನ ಕ್ರಮ ಕೈಗೊಳ್ಳಲಾಗಿದೆ. ಅವರ ಅನರ್ಹತೆಯಿಂದ ಪಂಜರದ ಪ್ರಜಾಪ್ರಭುತ್ವದಲ್ಲಿ ನಾವಿಂದು ನೆಲೆಸಿದ್ದೇವೆ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ” ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವ ರದ್ದತಿ ನಿರ್ಣಯವನ್ನು ಪ್ರತಿಪಕ್ಷಗಳ ಅನೇಕ ನಾಯಕರು ಒಕ್ಕೊರಲಿನಿಂದ ಖಂಡಿಸಿದ್ದಾರೆ. ಆರ್‌ಜೆಡಿ, ಬಿಆರ್‌ಎಸ್ ಸೇರಿದಂತೆ ಅನೇಕ ವಿಪಕ್ಷಗಳ ಸಂಸದರು ರಾಹುಲ್ ಗಾಂಧಿ ಅನರ್ಹತೆ ಬಗ್ಗೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಭಾರತೀಯ ಪ್ರಜಾಪ್ರಭುತ್ವ ಕುಸಿತದ ಕಡೆಗೆ ಸಾಗುತ್ತಿದೆ ಎಂದು ಅನೇಕ ಸಂಸದರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ಉಪನಾಮ ಕುರಿತಂತೆ 2019ರಲ್ಲಿ ಹೇಳಿಕೆ ನೀಡಿದ್ದ ಪ್ರಕರಣದಲ್ಲಿ ರಾಹುಲ್‌ ಗಾಂಧಿ ತಪ್ಪಿತಸ್ಥರು ಎಂದು ಸೂರತ್‌ ನ್ಯಾಯಾಲಯ ಗುರುವಾರ (ಮಾರ್ಚ್‌ 23) ತೀರ್ಪು ನೀಡಿತ್ತು. ಈ ಸಂಬಂಧ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮಹಾಧರಣಿ’ಗೆ ಸಿಎಂ ಸಿದ್ದರಾಮಯ್ಯ ಸ್ಪಂದನೆ: ಡಿ.19ರಂದು ಮಹತ್ವದ ಸಭೆ

ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಕಳೆದ ಮೂರು ದಿನಗಳಿಂದ ಸಂಯುಕ್ತ ಹೋರಾಟ ಸಮಿತಿಯ...

ದೇಶದಲ್ಲಿ ‘ಬ್ರ್ಯಾಂಡ್‌ ಬೆಂಗಳೂರು’ ನಂಬರ್ ಒನ್ ಆಗಿಸಬೇಕಿದೆ: ಸಿದ್ದರಾಮಯ್ಯ

'ದೇಶ ಸುಸ್ಥಿರವಾಗಿ ಬೆಳೆಯಬೇಕಾದರೆ ನಗರ-ಗ್ರಾಮೀಣ ಸುಸ್ಥಿರ ಬೆಳವಣಿಗೆ ಕಾಣಬೇಕು' 'ರಾಜ್ಯದ...

ಗುಜರಾತ್ | ಹಿಂದೂ ದೇಶದಲ್ಲಿರಬೇಕಾದರೆ ಜೈ ಶ್ರೀರಾಮ್ ಎನ್ನಬೇಕು ಎಂದವನ ಬಂಧನ

ವ್ಯಕ್ತಿಯೊಬ್ಬ ಹಿಂದೂ ದೇಶದಲ್ಲಿರಬೇಕಾದರೆ ನೀನು ಜೈ ಶ್ರೀರಾಮ್ ಎನ್ನಬೇಕು ಎಂದ ವ್ಯಕ್ತಿಯೊಬ್ಬನನ್ನು...

‘ಫ್ರೀಡಂ ಪಾರ್ಕ್’ನಿಂದ ನಮಗೆ ‘ಫ್ರೀಡಂ’ ಕೊಡಿ: ಸಿಎಂ ಸಿದ್ದರಾಮಯ್ಯಗೆ ‘ಮಹಾಧರಣಿ’ ಆಗ್ರಹ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಪ್ರತಿಭಟನೆಗಳು ಕೇವಲ 'ಫ್ರೀಡಂ ಪಾರ್ಕ್‌'ಗೆ ಸೀಮಿತವಾಗಿದ್ದು,...