- ಐದು ಟಿಎಂಸಿ ನೀರು ಕಾಯ್ದಿರಿಸಲು ಸರ್ಕಾರದಿಂದ ಕ್ರಮ
- ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆದೇಶ
ಬೇಸಿಗೆಯಲ್ಲಿ ಕಿತ್ತೂರು ಕರ್ನಾಟಕ ಭಾಗದ ಕುಡಿಯುವ ನೀರಿನ ಸಮಸ್ಯೆ ನಿಭಾಯಿಸಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಪ್ರದೇಶಗಳ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸಲು ಅನುಕೂಲವಾಗುವಂತೆ ಘಟಪ್ರಭಾ ನದಿಯ ಹಿಡಕಲ್ ಜಲಾಶಯದಲ್ಲಿ ಹೆಚ್ಚುವರಿ 5 ಟಿಎಂಸಿ ನೀರು ಕಾಯ್ದಿರಿಸಲು ಆದೇಶಿಸಿದೆ.
ಸರ್ಕಾರದ ಈ ನಿರ್ಧಾರದಿಂದ ಬಾಗಲಕೋಟೆ, ಮುಧೋಳ, ಬೆಳಗಾವಿ ನಗರ, ಬೆಳಗಾವಿ ಜಿಲ್ಲೆಯ ಇತರೆ ಕೆಲವು ಪ್ರದೇಶಗಳ ನೀರಿನ ಬವಣೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ ಎಂದು ಹೇಳಲಾಗಿದೆ.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇದರ ಬಗ್ಗೆ ಆದೇಶ ಹೊರಡಿಸಿದ್ದು, “ರಾಷ್ಟ್ರೀಯ ಜಲ ನೀತಿಯನ್ವಯ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.
ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಾಗಲಕೋಟೆ ಜಿಲ್ಲೆಗೆ ಹಿಡಕಲ್ ಜಲಾಶಯದಲ್ಲಿ ಈಗ ಕಾಯ್ದಿರಿಸಿದ 4.00 ಟಿಎಂಸಿ ಬದಲಾಗಿ 5.00 ಟಿಎಂಸಿ ನೀರನ್ನು ಕಾಯ್ದಿರಿಸಲಾಗಿದೆ. ಘಟಪ್ರಭಾ ನೀರಾವರಿ ಸಲಹಾ ಸಮಿತಿಯೊಂದಿಗೆ ಸಮಾಲೋಚಿಸಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಸೂಕ್ತ ವ್ಯವಸ್ಥೆ ಮಾಡಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ನ.14 ರಂದು ಜರುಗಿದ ಘಟಪ್ರಭಾ ನೀರಾವರಿ ಯೋಜನಾ ಸಲಹಾ ಸಮಿತಿಯ ಸಭೆಯಲ್ಲಿ ಬಾಗಲಕೋಟೆ ಮತ್ತು ಮುಧೋಳ ನಗರ ಸೇರಿದಂತೆ ಬೆಳಗಾವಿ ಜಿಲ್ಲೆಯ ಪ್ರದೇಶಗಳಿಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅವಶ್ಯಕ ಕುಡಿಯುವ ನೀರನ್ನು ಕಾಯ್ದಿರಿಸಲು ತೀರ್ಮಾನಿಸಲಾಗಿತ್ತು.
ಬಾಗಲಕೋಟೆ ಜಿಲ್ಲಾಧಿಕಾರಿಗಳ ಕೋರಿಕೆಯನ್ವಯ ಈ ಮೊದಲು ಕಾಯ್ದಿರಿಸಿದ 4.00 ಟಿಎಂಸಿ ಬದಲಾಗಿ 5.00 ಟಿಎಂಸಿ ನೀರನ್ನು ಕಾಯ್ದಿರಿಸಲು ಸರ್ಕಾರವು ತೀರ್ಮಾನಿಸಿದ್ದು, ಆದೇಶ ಸಂಖ್ಯೆ: ಜಸಂಇ 13 ಎನ್‌ಐಎನ್ 2023 ದಿ. 10/03/2023 ರಂದು ಹೊರಡಿಸಲಾದ ಆದೇಶದಂತೆ ನಿರ್ದೇಶನ ನೀಡಿದೆ.