ಜಿಲ್ಲೆಯ ಸುಮಾರು 2.80 ಲಕ್ಷ ರೈತರಿಗೆ ಬಾಕಿ ಇರುವ ಅಂದಾಜು ₹300 ಕೋಟಿ ಬೆಳೆ ಕಟಾವು ವಿಮೆ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ವಿದ್ಯುತ್ ವಿತರಣಾ ಕ್ಷೇತ್ರದ ಖಾಸಗೀಕರಣಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಬುಧವಾರ ಚಿಂಚೋಳಿ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕೆಪಿಆರ್‌ಎಸ್ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಕಳೆದ ವರ್ಷ ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆದ ತೊಗರಿಗೆ ಸಮರ್ಪಕ ಬೆಂಬಲ ಬೆಲೆ ಸಿಗದ ಕಾರಣ ಆರ್ಥಿಕವಾಗಿ ಕಂಗೆಟ್ಟಿದ್ದಾರೆ ಎಂದು ಆರೋಪಿಸಿದರು.
ಮುಂಗಾರು ಬಿತ್ತನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರು ಬೀಜ ಮತ್ತು ರಸಗೊಬ್ಬರ ಖರೀದಿಸಲು ಹಣದ ಕೊರತೆಯಿಂದ ಪರದಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ರಸಗೊಬ್ಬರ ಕೊರತೆ ಕಂಡುಬರುತ್ತಿದ್ದು, ರೈತರು ಎಪಿಎಂಸಿ, ಟಿಎಪಿಸಿಎಂಎಸ್ ಹಾಗೂ ಸಹಕಾರ ಸಂಘಗಳ ಮುಂದೆ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ದುಸ್ಥಿತಿ ಎದುರಿಸುತ್ತಿದ್ದಾರೆ ಎಂದು ಹೇಳಿದರು.
ರಾಜ್ಯ ಸರ್ಕಾರದಿಂದ ಬಾಕಿ ಇರುವ ಬೆಳೆ ವಿಮೆ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡಿದರೆ ರೈತರಿಗೆ ಬಿತ್ತನೆ ಕಾರ್ಯ ಕೈಗೊಳ್ಳಲು ನೆರವಾಗಲಿದೆ. ಹೀಗಾಗಿ ಯಾವುದೇ ವಿಳಂಬವಿಲ್ಲದೆ ವಿಮೆ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಬೇಕು ಎಂದು ಒತ್ತಾಯಿಸಿದರು.
This video cannot be played in your browser. Open the video directly

ಇದೇ ವೇಳೆ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಟಾಟಾ ಪವರ್‌ಗೆ ಪರವಾನಿಗೆ ನೀಡುವ ಪ್ರಸ್ತಾವವನ್ನು ವಿರೋಧಿಸಿದ ರೈತ ಸಂಘದ ಮುಖಂಡರು, ಸರ್ಕಾರಿ ವಿದ್ಯುತ್ ಕಂಪನಿಗಳಿದ್ದರೂ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸುವುದು ರೈತರು ಹಾಗೂ ಗ್ರಾಮೀಣ ಗ್ರಾಹಕರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.

ಖಾಸಗೀಕರಣದಿಂದ ಯುವಕ-ಯುವತಿಯರ ಉದ್ಯೋಗಾವಕಾಶಗಳು ಮತ್ತು ಮೀಸಲಾತಿ ಸೌಲಭ್ಯಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ರೈತರಿಗೆ ದೊರೆಯುತ್ತಿರುವ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಸೌಲಭ್ಯಗಳ ಮೇಲೂ ಪರಿಣಾಮ ಬೀರುವ ಆತಂಕವಿದೆ ಎಂದು ತಿಳಿಸಿದರು.
ಸರ್ಕಾರಿ ವಿದ್ಯುತ್ ಕಂಪನಿಗಳನ್ನು ಬಲಪಡಿಸಿ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಬೇಕು. ಟಾಟಾ ಪವರ್‌ಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡುವ ಪ್ರಕ್ರಿಯೆಯನ್ನು ಕೈಬಿಟ್ಟು, ರೈತರು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸಬೇಕು ಎಂದು ಸರ್ಕಾರ ಮತ್ತು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಲೋಕಾಯುಕ್ತ ಬಲೆಗೆ ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್; ಲಾಕರ್‌ನಲ್ಲಿ ₹9 ಲಕ್ಷ ಹಳೆಯ ನೋಟು ಪತ್ತೆ
ಪ್ರತಿಭಟನೆಯಲ್ಲಿ ಜಾಫರ್ ಖಾನ್, ವೈಜಿನಾಥ ಸಾತಪ್ಪನೋರ, ಸಿದ್ದಲಿಂಗಯ್ಯ ಸ್ವಾಮಿ, ಶಂಕ್ರಯ್ಯ ಸ್ವಾಮಿ, ಸಿದ್ದಪ್ಪ ಭೂತಾಳ ಸೇರಿದಂತೆ ರೈತ ಸಂಘದ ಮುಖಂಡರು ಮತ್ತು ರೈತರು ಭಾಗವಹಿಸಿದ್ದರು.





