“ನಿಷ್ಠಾವಂತ ಸೇವೆಯೇ ನಮ್ಮ ನಿಜವಾದ ಗುರುತು. ಕರ್ತವ್ಯಪ್ರಜ್ಞೆ, ಸಮಯಪಾಲನೆ ಹಾಗೂ ಮಾನವೀಯ ಮೌಲ್ಯಗಳೊಂದಿಗೆ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜ ಮತ್ತು ಸರ್ಕಾರದ ಗೌರವಕ್ಕೆ ಪಾತ್ರರಾಗಲು ಸಾಧ್ಯ” ಎಂದು ಚಿತ್ತಾಪುರ ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ಶಹಾಬಾದ್ ಆಡಳಿತ ವೈದ್ಯಾಧಿಕಾರಿ ಡಾ. ವೀರನಾಥ ಕನಕ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲಬುರಗಿ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ಶಹಾಬಾದ್ ಇವರ ಸಂಯುಕ್ತ ಆಶ್ರಯದಲ್ಲಿ ವರ್ಗಾವಣೆಗೊಂಡ ಮುಖ್ಯ ದಂತ ಆರೋಗ್ಯಾಧಿಕಾರಿ ಡಾ. ಸಂಧ್ಯಾ ಕಾನೇಕರ ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

“ಡಾ. ಸಂಧ್ಯಾ ಕಾನೇಕರ ಅವರು ಸುಮಾರು ಹತ್ತು ವರ್ಷ ಹತ್ತು ತಿಂಗಳ ಕಾಲ ಶಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸಿ, ಕರ್ತವ್ಯನಿಷ್ಠೆ, ಸಮಯಪಾಲನೆ ಹಾಗೂ ಪ್ರಾಮಾಣಿಕತೆಯಿಂದ ಜನಮೆಚ್ಚುಗೆ ಗಳಿಸಿದ್ದಾರೆ. ಸಿಬ್ಬಂದಿಯೊಂದಿಗೆ ಸಮಾನತೆಯಿಂದ ನಡೆದುಕೊಂಡು, ದಂತ ಆರೋಗ್ಯ ಜಾಗೃತಿ ಸೇರಿದಂತೆ ವಿವಿಧ ಆರೋಗ್ಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ” ಎಂದು ಪ್ರಶಂಸಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿತ್ತಾಪುರ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಪ್ರಭಾರಿ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ. ಅಬ್ದುಲ್ ರಹೀಂ ಮಾತನಾಡಿ, “ಡಾ. ಸಂಧ್ಯಾ ಅವರೊಂದಿಗೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅನುಭವ ಸಂತಸ ತಂದಿದೆ. ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಕಾರ್ಯಕ್ರಮಗಳು ಹಾಗೂ ಆಡಳಿತಾತ್ಮಕ ಕಾರ್ಯಗಳ ಕುರಿತು ಉತ್ತಮ ಅನುಭವ ಪಡೆದಿದ್ದೇನೆ” ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಅಮರೇಶ ಇಟಗಿ, “ಡಾ. ಸಂಧ್ಯಾ ಅವರು ತಾಯಿಯ ಮಮತೆಯೊಂದಿಗೆ ದಕ್ಷ ಆಡಳಿತಗಾರರಾಗಿ ಕಾರ್ಯನಿರ್ವಹಿಸಿದ್ದು, ಸಮಯಪಾಲನೆ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವದಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ” ಎಂದು ತಿಳಿಸಿದರು.
ಬೀಳ್ಕೊಡುಗೆ ಸ್ವೀಕರಿಸಿ ಮಾತನಾಡಿದ ಡಾ. ಸಂಧ್ಯಾ ಕಾನೇಕರ, “ಶಹಾಬಾದ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಳೆದ ಸೇವಾ ಅವಧಿ ತಮ್ಮ ವೃತ್ತಿ ಜೀವನದ ಅಮೂಲ್ಯ ಅಧ್ಯಾಯವಾಗಿದೆ. ಸಹೋದ್ಯೋಗಿಗಳ ಸಹಕಾರ, ಸಿಬ್ಬಂದಿಯ ಬೆಂಬಲ ಹಾಗೂ ಸಾರ್ವಜನಿಕರ ಪ್ರೀತಿ, ವಿಶ್ವಾಸವೇ ತಮ್ಮ ಸೇವೆಗೆ ಪ್ರೇರಣೆಯಾಗಿದೆ” ಎಂದು ಭಾವುಕರಾಗಿ ಹೇಳಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಹೂವಿನಬಾವಿ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಡಾ. ಶ್ರೀನಿವಾಸ್, ಡಾ. ವೈಶಾಲಿ, ಡಾ. ಇಮ್ತಿಯಾಜ್, ಡಾ. ವೈಭವ್, ಸುರೇಶ್ ಕಾನೇಕರ, ಶೀಲಾ, ಮಮತಾ, ರಾಹುಲ್ ಹುಗ್ಗಿ, ಸಂಜಯ್ ರಾಥೋಡ್, ಆನಂದ್ ಕುಮಾರ್, ಬಸ್ಸಯ್ಯ ಹಿರೇಮಠ್, ಯೂಸುಫ್ ನಾಕೇದಾರ, ಸುಮಂಗಲ ಕಿಣಗಿ, ಸರಿತಾ ಸೇರಿದಂತೆ ವೈದ್ಯರು, ಸಿಬ್ಬಂದಿ, ಸಾರ್ವಜನಿಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.





