ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಅವರಿಗೆ ಜಾತಿನಿಂದನೆ ಮಾಡಿರುವ ಆಳಂದ ಶಾಸಕ ಬಿ.ಆರ್. ಪಾಟೀಲ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಆಳಂದ ಮಂಡಲ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸೋಮವಾರ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರು ಜಮಾಯಿಸಿದ ನೂರಾರು ಕಾರ್ಯಕರ್ತರು ಶಾಸಕ ಬಿ.ಆರ್.ಪಾಟೀಲ ಅವರ ಪ್ರತಿಕೃತಿ ದಹಿಸಿ ಘೋಷಣೆ ಕೂಗಿದರು.
ಆಳಂದ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ ಪಾಟೀಲ, “ಶಾಸಕ ಬಿ.ಆರ್.ಪಾಟೀಲ ನಕಲಿ ಸಮಾಜವಾದಿಯಾಗಿದ್ದಾರೆ. ಕೇವಲ ಚುನಾವಣೆ ಗೆಲ್ಲುವುದಕ್ಕಾಗಿ ಮಾತ್ರ ಬಣ್ಣದ ಮಾತುಗಳನ್ನು ಹೇಳುತ್ತಾರೆ. ಬಿ.ಆರ್. ಪಾಟೀಲರಿಗೆ ಅಸಲಿಗೆ ಸಿದ್ಧಾಂತ ಎನ್ನುವುದೇ ಇಲ್ಲ. ಅವರೊಬ್ಬ ಸಮಯಸಾಧಕ ರಾಜಕಾರಣಿ. ಸಮಾಜದ ಯಾವ ವರ್ಗದ ಬಗ್ಗೆಯೂ ಅವರಿಗೆ ಕಾಳಜಿಯಿಲ್ಲ. ಈ ಹಿಂದೆಯೂ ಅನೇಕ ಬಾರಿ ಸಮಾಜದ್ರೋಹಿ ಹೇಳಿಕೆ ಮೂಲಕ ಸಮಾಜವನ್ನು ಒಡೆಯುವುದು, ಸಾಮರಸ್ಯ ಕೆಡಿಸುವ ಹೇಳಿಕೆ ನೀಡಿದ್ದಾರೆ ಇಂಥವರು ಶಾಸಕ ಸ್ಥಾನದಲ್ಲಿ ಮುಂದುವರೆಯಲು ಅರ್ಹತೆಯಿಲ್ಲ. ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದರು.
ಹಿರಿಯ ಮುಖಂಡ ಬಸವರಾಜ ಬಿರಾದಾರ ಮಾತನಾಡಿ, “ಶಾಸಕ ಬಿ.ಆರ್.ಪಾಟೀಲ ತಮ್ಮ ಕಾರ್ಯಕರ್ತರ ಜೊತೆಗೆ ದೂರವಾಣಿ ಮೂಲಕ ಮಾತನಾಡುವಾಗ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಅವರಿಗೆ ಜಾತಿ ನಿಂದನೆ ಮಾಡಿ ಅವಹೇಳನ ಮಾಡಿದ್ದಾರೆ. ಇದು ಸಂವಿಧಾನ ವಿರೋಧಿ ನಡೆಯಾಗಿದೆ. ಮಾಜಿ ಶಾಸಕ ಸುಭಾಷ್ ಗುತ್ತೇದಾರ ಅವರನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲೆಂದೇ ಜಾತಿ ನಿಂದನೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ದೂರವಾಣಿಯಲ್ಲಿ, ಜಾತಿವಾದಿ ಟೀಕೆ ಮಾಡುವುದು ಕ್ರಿಮಿನಲ್ ಅಪರಾಧವಾಗಿದ್ದು” ಎಂದು ಆರೋಪಿಸಿದರು.
“ಸಂವಿಧಾನ ಬದ್ದವಾಗಿ ಪ್ರಮಾಣ ವಚನ ಸ್ವೀಕರಿಸಿ ಜಾತಿನಿಂದನೆ ಮಾಡಿ ಸಂವಿಧಾನಕ್ಕೆ ಮತ್ತು ಶಾಸಕ ಸ್ಥಾನಕ್ಕೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಇವರ ಮೇಲೆ ಜಾತಿನಿಂದನೆ ಪ್ರಕರಣ ದಾಖಲಿಸಲು ಸೂಕ್ತ ನಿರ್ದೇಶನ ನೀಡಿ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು” ಒತ್ತಾಯಿಸಿದರು.
ಈ ಸುದ್ದಿ ಓದಿದೀರಾ? ಈ ದಿನ ಸಂಪಾದಕೀಯ | ಸರ್ಕಾರದ ಆರು ತಿಂಗಳ ‘ಅನನ್ಯ ಸಾಧನೆ’ ಮತ್ತು ವಿರೋಧ ಪಕ್ಷಗಳ ‘ಜವಾಬ್ದಾರಿ
ಈ ಸಂದರ್ಭದಲ್ಲಿ ಮುಖಂಡರಾದ ಹಣಮಂತರಾವ ಕಾಬಡೆ, ಗೊರಖನಾಥ ದೊಡ್ಡಮನಿ, ಮಲ್ಲಿಕಾರ್ಜುನ ಕಂದಗೂಳೆ, ಮಲ್ಲಣ್ಣ ನಾಗೂರೆ, ಮಲ್ಲಿಕಾರ್ಜುನ ತಡಕಲ, ಚಂದ್ರಕಾಂತ ಭೂಸನೂರ, ರುದ್ರಯ್ಯ ಹಿರೇಮಠ, ಶ್ರೀಮಂತ ನಾಮಣೆ, ಶಿವಪುತ್ರ ಬೆಳ್ಳೆ, ಅಮೃತ ಬಿಬ್ರಾಣಿ, ಆದಿನಾಥ ಹೀರಾ, ಜಗನ್ನಾಥ ಹೊಸಕುರುಬ, ಗೌಡಪ್ಪ ಪಾಟೀಲ, ಪ್ರಭಾಕರ ರಾಮಜಿ, ಅಶೋಕ ಗುತ್ತೇದಾರ, ಶಿವಾನಂದ ಪಾಟೀಲ, ಶರಣಗೌಡ ಪಾಟೀಲ. ಸುಭಾಷ ಪಾಟೀಲ, ರಮೇಶ ಪಾಟೀಲ, ತಿಪ್ಪಯ್ಯ ಗುತ್ತೇದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.