ನ್ಯಾ. ಹೆಚ್. ಕಾಂತರಾಜ ಆಯೋಗದ ವರದಿಯನ್ನು ಕೂಡಲೇ ಸ್ವೀಕರಿಸಿ ನಿಜವಾದ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಆಧಾರದ ಮೇಲೆ ಮೀಸಲಾತಿ ಪರಿಷ್ಕರಿಸಿ ಸಾಮಾಜಿಕ ನ್ಯಾಯ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ಹಿಂದುಳಿದ ಜಾತಿಗಳ ಒಕ್ಕೂಟ ಪ್ರತಿಭಟನೆ ನಡೆಸಿದೆ.
ಕಲಬುರಗಿಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಕಲಬುರಗಿ ಹಾಗೂ ಕರ್ನಾಟಕ ಹಿಂದುಳಿದ ವರ್ಗಗಳ ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟು ಸಮುದಾಯಗಳ ಮಹಾ ಒಕ್ಕೂಟದದಿಂದ ಜಿಲ್ಲೆಯ ಎಲ್ಲಾ ಶೋಷಿತರ ಮತ್ತು ಹಿಂದುಳಿದ ಸಮುದಾಯಗಳನ್ನೊಳಗೊಂಡು ನ್ಯಾಯವಾದಿ ಹೆಚ್. ಕಾಂತರಾಜ ವರದಿಯನ್ನು ರಾಜ್ಯ ಸರಕಾರ ಕೂಡಲೇ ಸ್ವೀಕರಿಸಲು ಬೆಂಬಲಿಸಿ ಮತ್ತು ವರದಿ ಬಿಡುಗಡೆಗೆ ವಿರೋಧಿಸುವವರ ಹೇಳಿಕೆಗಳನ್ನು ಖಂಡಿಸಿದರು.
ಬೃಹತ್ ಪ್ರತಿಭಟನಾ ಮೆರವಣಿಗೆ ಹಾಗೂ ಒಂದು ದಿನದ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
“1931 ರ ನಂತರ ಇಡೀ ದೇಶದಲ್ಲಿಯೇ ಕರ್ನಾಟಕ ಮೊದಲ ಬಾರಿಗೆ ರಾಜ್ಯದ ಎಲ್ಲಾ ಜಾತಿ ಜನಾಂಗಗಳ ಸಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ತಯಾರಿಸಿದ್ದು, ಒಂದು ಐತಿಹಾಸಿಕ ಕಾರ್ಯವಾಗಿದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳೆಂದು ಪರಿಗಣಿತವಾದ ಸಮುದಾಯಗಳ ಉನ್ನತಿಗಾಗಿ ರಾಜ್ಯ ಸರಕಾರ ಕಾಲಕಾಲಕ್ಕೆ ಹಲವಾರು ಆಯೋಗಳನ್ನು ರಚನೆ ಮಾಡಿ ಅವರಿಂದ ವರದಿಯನ್ನು ಸ್ವೀಕರಿಸಿ ಹಿಂದುಳಿದವರಿಗೆ ಮೀಸಲಾತಿಯನ್ನು ಶೇ. 50% ನೀಡಬೇಕೆಂದು ಆಯೋಗಗಳು ಹೇಳಿವೆ. ಆದರೆ ಹಿಂದುಳಿದ ವರ್ಗಕ್ಕೆ ಅರ್ಹತೆ ಇಲ್ಲದಿದ್ದರೂ ರಾಜಕೀಯ ಒತ್ತಡದಿಂದ ಬಲಾಡ್ಯ ಗುಂಪುಗಳು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪಟ್ಟಿಯ ಮೀಸಲಾತಿಯನ್ನು ಪಡೆದಿವೆ, ಇದು ನಿಜವಾದ ಹಿಂದುಳಿದ ವರ್ಗದವರಿಗೆ ಅನ್ಯಾಯವನ್ನು ಮಾಡುತ್ತಾ ಬರಲಾಗಿದೆ. ಈಗಲೂ ಸಹ ಹಿಂದುಳಿದ ಪಟ್ಟಿಯಲ್ಲಿ ಸೇರ್ಪಡೆಯಾಗಲು ಹವಣಿಸುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ ಮತ್ತು ಹಿಂದುಳಿದ ವರ್ಗದವರಿಗೆ ಮಾಡುವ ದ್ರೋಹವಾಗಿದೆ” ಎಂದು ಎಂದು ಪ್ರತಿಭಟನಾಕಾರರು ಖಂಡಿಸಿದರು.
“ಸಂವಿಧಾನದ ಆಶಯದಂತೆ ನಿಜವಾದ ಹಿಂದುಳಿದವರಿಗೆ ಮೀಸಲಾತಿ ಸಿಗಬೇಕು, ಆದರೆ, ಬಲಾಡ್ಯರು ರಾಜಕೀಯ ಅಸ್ಥಿರ ಮಾಡುತ್ತೆವೆಂದು ಬೆದರಿಕೆ ಹಾಕಿ ವರದಿಗೆ ವಿರೋಧ ಮಾಡುತ್ತಿದ್ದಾರೆ. ಇಡೀ ಶೋಷಿತ ಮತ್ತು ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯವನ್ನು ಇಡೀ ಹಿಂದುಳಿದ ವರ್ಗ ಸಹಿಸಿಕೊಳ್ಳಲು ಸಾಧ್ಯವಿಲ್ಲ. ಯಾರು ಈ ವರದಿಯನ್ನು ವಿರೋಧ ಮಾಡುತ್ತಾರೋ ಸಮಸ್ತ ಶೋಷಿತ ಮತ್ತು ಹಿಂದುಳಿದ ಸಮುದಾಯದ ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು” ಎಂದು ಎಚ್ಚರಿಸಿದರು.
“ಸಾಮಾಜಿಕ ಮತ್ತು ಹಿಂದುಳಿದ ವರ್ಗಗಳಿಗೆ ಮಹಾನ್ ಗ್ರಂಥವಾಗಿ ಹೊರಹೊಮ್ಮುವ ನ್ಯಾ. ಕಾಂತರಾಜ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿಯನ್ನು ಬಿಡುಗಡೆ ಮಾಡಬಾರದೆಂದು ಕೇವಲ ಎರಡು ಸಂಘಗಳು ವಿರೋಧ ಮಾಡುತ್ತಿವೆ. ಆದರೆ, ಈ ವರದಿ ಸ್ವೀಕಾರ ಮಾಡಬೇಕೆಂದು ನೂರಾರು ಸಮುದಾಯಗಳ ಸಂಘ ಸಂಸ್ಥೆಗಳು ಆಗ್ರಹಿಸುತ್ತಿವೆ. ಬಹುಜನರ ಒತ್ತಾಯ ಹಾಗೂ ಆಶಯದಂತೆ ನಿಜವಾದ ಶೋಷಿತರ, ಹಿಂದುಳಿದ ವರ್ಗದವರ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಈ ವರದಿಯನ್ನು ಸ್ವೀಕರಿಸಿ ಬಿಡುಗಡೆಗೊಳಿಸಿ ಹಿಂದುಳಿದ ವರ್ಗದವರಿಗೆ ಸಂವಿಧಾನ ಬದ್ಧವಾಗಿ ಸಿಗಬೇಕಾದ ಮೀಸಲಾತಿಯನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ನೀಡಬೇಕೆಂದು” ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ನ. 26 ರಿಂದ 28 ವರೆಗೆ ಬೆಂಗಳೂರಿನಲ್ಲಿ ರಾಜ ಭವನ ಚಲೋ ಮಹಾಧರಣಿ
ಈ ಸಂದರ್ಭದಲ್ಲಿ ಮಹಾಂತೇಶ ಎಸ್. ಕೌಲಗಿ, ಪಿಡ್ಡಪ್ಪ ಜಾಲಗಾರ್, ಮಲ್ಲಿಕಾರ್ಜುನ ಪೂಜಾರಿ, ಕುಮಾರ್ ಯಾಧವ್, ಮಹಬೂಬ್ ಶಹಾ ದರ್ವೆಶಿ, ಮಹಾಂತೇಶ್ ಯಾಧವ್, ಸೈಬಣ್ಣ ಹೆಳವಾರ, ಭೀಮಶಾ ಖನ್ನಾ, ವಿ. ಸಿ. ನಿರಡಗಿ, ಜಗತ್ ಸಿಂಗ್, ಚಂದ್ರಕಾಂತ್ ಎನ್.ಪವಾರ, ಅರುಣಕುಮಾರ್, ಹಣಮಯ್ಯಾ ಆಲೂರು, ಚಂದ್ರಕಾಂತ್ ಎನ್. ಪವಾರ, ವಾಣಿಶ್ರೀ ಸಗರಕರ್, ವಿಜಯಲಕ್ಷ್ಮಿ ಎಸ್. ಮುಗಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.