ಮುಂಗಾರು ಮಳೆ ಆರಂಭಗೊಂಡ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದು, ಈ ಸಂದರ್ಭದಲ್ಲಿ ಡಿಎಪಿ ರಸಗೊಬ್ಬರವನ್ನು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇಡಂ ವಿಧಾನಸಭಾ ಘಟಕವು ಕೃಷಿ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.
ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಬಿಎಸ್‌ಪಿ ಸೇಡಂ ವಿಧಾನಸಭಾ ಅಧ್ಯಕ್ಷ ರೇವಣಸಿದ್ದಪ್ಪ ಎಸ್. ಸಿಂಧೆ ಅವರು, ಸರ್ಕಾರ ಡಿಎಪಿ ರಸಗೊಬ್ಬರದ ದರವನ್ನು ₹1,350ಕ್ಕೆ ನಿಗದಿಪಡಿಸಿದ್ದರೂ, ಕೆಲವು ಖಾಸಗಿ ರಸಗೊಬ್ಬರ ಮಾರಾಟಗಾರರು ರೈತರಿಂದ ₹1,850 ರಿಂದ ₹1,950ರವರೆಗೆ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಇದಲ್ಲದೆ, ರಸಗೊಬ್ಬರ ಖರೀದಿಸಿದ ರೈತರಿಗೆ ಕಡ್ಡಾಯವಾಗಿ ನೀಡಬೇಕಾದ ರಸೀದಿಯನ್ನೂ ನೀಡದೆ ರೈತರನ್ನು ಶೋಷಣೆ ಮಾಡಲಾಗುತ್ತಿದೆ. ಈ ಬಗ್ಗೆ ಅನೇಕ ರೈತರು ತಮ್ಮ ಅಳಲನ್ನು ಬಿಎಸ್‌ಪಿ ಮುಖಂಡರ ಬಳಿ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣವೇ ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಬೇಕು. ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡುತ್ತಿರುವ ಅಂಗಡಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಕ್ರಮದಲ್ಲಿ ತೊಡಗಿರುವ ಅಂಗಡಿಗಳ ಪರವಾನಗಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ರೈತರ ಹಿತಾಸಕ್ತಿಗೆ ಧಕ್ಕೆ ತರುವ ಇಂತಹ ಕಾಳಸಂತೆ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ, ಕೃಷಿ ಇಲಾಖೆಯ ಕಚೇರಿ ಎದುರು ಬೃಹತ್ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಬಿಎಸ್‌ಪಿ ಸೇಡಂ ವಿಧಾನಸಭಾ ಘಟಕ ಎಚ್ಚರಿಕೆ ನೀಡಿದೆ.
ಇದನ್ನು ಓದಿದ್ದೀರಾ? ಕಲಬುರಗಿ | ತೆಲ್ಕರ್ ಬಡಾವಣೆಯಲ್ಲಿ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ: ಪರಿಸರ ಸಂರಕ್ಷಣೆಗೆ ಸಾಮೂಹಿಕ ಸಂಕಲ್ಪ
ಈ ಸಂದರ್ಭದಲ್ಲಿ ಶ್ರೀಕಾಂತ್ ಸೌಕರ ಹಣಮನಹಳ್ಳಿ, ಅರುಣ್ ನಾಟ್ಟೆಕರ, ಯಲ್ಲಪ್ಪ ಭೋವಿ, ಶಿವಾನಂದ ಭೋವಿ, ಅರವಿಂದ ಮಡಿವಾಳ, ನಾಗಪ್ಪ ಗೌಂಡಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.





