ಕಾರವಾರ: ಪಡೆದ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ಮರುಪಾವತಿಸಿದರೂ ಇನ್ನೂ ಬಡ್ಡಿ ಹಣ ನೀಡುವಂತೆ ಒತ್ತಾಯಿಸಿ, ಸರ್ವಿಸ್ ರಿವಾಲ್ವರ್‌ನಿಂದ ಗುಂಡಿಕ್ಕುವುದಾಗಿ ಹಾಗೂ ಜೆಸಿಬಿ ಮೂಲಕ ಮನೆ ಕೆಡವಿಸುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮೂವರ ವಿರುದ್ಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರ ಕಾಜುಬಾಗ್ ನಿವಾಸಿ ರೋಹನ್ ನರಸಿಂಹ ರಾಯ್ಕರ್, ಪಿಕಳೆ ರಸ್ತೆ ನಿವಾಸಿಗಳಾದ ಸುನೀಲ್ ಸದಾನಂದ ಕಲ್ಗುಟುಕರ್ ಹಾಗೂ ಸಂಪದಾ ಸುನೀಲ್ ಕಲ್ಗುಟುಕರ್ ಪ್ರಕರಣದ ಆರೋಪಿಗಳಾಗಿದ್ದಾರೆ. ಕಾರವಾರ ಶೇಜವಾಡ ನಿವಾಸಿ ಹಾಗೂ ಸೆಕ್ಯೂರಿಟಿ ಗಾರ್ಡ್ ಆಗಿರುವ ಪ್ರಣೀತ್ ದಿಗಂಬರ ಶೇಜವಾಡಕರ್ (43) ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದೂರಿನಲ್ಲಿ ತಿಳಿಸಿರುವಂತೆ, ಪ್ರಣೀತ್ ಅವರು 2024ರ ಆಗಸ್ಟ್‌ನಲ್ಲಿ ರೋಹನ್ ಅವರಿಂದ ₹1 ಲಕ್ಷ ಸಾಲ ಕೇಳಿದ್ದರು. ಈ ವೇಳೆ ₹10 ಸಾವಿರವನ್ನು ಬಡ್ಡಿಯಾಗಿ ಮುಂಗಡವಾಗಿ ಕಡಿತಗೊಳಿಸಿ ₹90 ಸಾವಿರ ಮಾತ್ರ ನೀಡಲಾಗಿತ್ತು ಎನ್ನಲಾಗಿದೆ. ನಂತರ ಅಗತ್ಯಕ್ಕೆ ಅನುಗುಣವಾಗಿ ಹಂತ ಹಂತವಾಗಿ ಪ್ರಣೀತ್ ಹಾಗೂ ಅವರ ಪತ್ನಿಯ ಯೂನಿಯನ್ ಬ್ಯಾಂಕ್ ಖಾತೆಗಳಿಗೆ ಆರೋಪಿಗಳಿಂದ ಒಟ್ಟು ₹12.28 ಲಕ್ಷ ಹಣ ವರ್ಗಾವಣೆಯಾಗಿತ್ತು.
ಈ ಸುದ್ದಿ ಓದಿದ್ದೀರಾ ? ಕಾರವಾರ | ಸರ್ಕಾರಿ ಪಿಯು ಕಾಲೇಜಿನಲ್ಲಿ ಸಿಇಟಿ, ನೀಟ್, ಜೆಇಇಗೆ ಉಚಿತ ತರಬೇತಿ
ಸಾಲಕ್ಕೆ ಭದ್ರತೆಯಾಗಿ ಸಂಪದಾ ಮತ್ತು ಸುನೀಲ್ ಅವರ ಹೆಸರಿನಲ್ಲಿ ಕರಾರು ಪತ್ರ ಮಾಡಿಸಿಕೊಂಡು, ಯೂನಿಯನ್ ಬ್ಯಾಂಕ್‌ನ ಮೂರು ಖಾಲಿ ಚೆಕ್‌ಗಳಿಗೆ ಸಹಿ ಪಡೆದುಕೊಂಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ. 2024ರ ಆಗಸ್ಟ್ 8ರಿಂದ 2026ರ ಸೆಪ್ಟೆಂಬರ್ 1ರವರೆಗೆ ಪ್ರಣೀತ್ ಅವರು Mahabharat ಫೋನ್‌ಪೇ ಮೂಲಕ ಹಾಗೂ ನಗದು ರೂಪದಲ್ಲಿ ಒಟ್ಟು ₹26.01 ಲಕ್ಷ ಪಾವತಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಸಾಲವಾಗಿ ಪಡೆದ ಮೊತ್ತಕ್ಕಿಂತ ಎರಡು ಪಟ್ಟು ಹಣ ನೀಡಿದ್ದರೂ ಕರಾರು ಪತ್ರವನ್ನು ರದ್ದುಪಡಿಸದೆ ಹಾಗೂ ಖಾಲಿ ಚೆಕ್‌ಗಳನ್ನು ವಾಪಸ್ ನೀಡದೆ ಆರೋಪಿಗಳು ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಚೆಕ್ ಹಾಗೂ ಕರಾರು ಪತ್ರಗಳನ್ನು ವಾಪಸ್ ಪಡೆಯಲು ಪ್ರಣೀತ್ ಅವರು ಕೇಳಿದಾಗ, ಸುನೀಲ್ ಕಲ್ಗುಟುಕರ್ ಅವರು ಬಡ್ಡಿ ಹಣ ನೀಡದಿದ್ದರೆ ಸರ್ವಿಸ್ ರಿವಾಲ್ವರ್‌ನಿಂದ ಗುಂಡಿಕ್ಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಮುಂಬೈನಿಂದ ರೌಡಿಗಳನ್ನು ಕರೆಸಿ ಕೊಲೆ ಮಾಡಿಸುವುದಾಗಿ ಹಾಗೂ ಜೆಸಿಬಿ ಮೂಲಕ ಮನೆ ಕೆಡವಿಸುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಪ್ರಣೀತ್ ಅವರ ಪತ್ನಿಗೂ ಪದೇಪದೇ ಕರೆ ಮಾಡಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಭದ್ರತೆಗಾಗಿ ಪಡೆದಿದ್ದ ಖಾಲಿ ಚೆಕ್‌ವೊಂದರಲ್ಲಿ ₹13.50 ಲಕ್ಷ ಮೊತ್ತ ನಮೂದಿಸಿ ಬ್ಯಾಂಕ್‌ಗೆ ಹಾಕಿ ಬೌನ್ಸ್ ಮಾಡಿಸಲಾಗಿದೆ. ಇನ್ನೂ ಹಣ ಪಾವತಿಸಬೇಕು, ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಡ್ಡಿ ಹಣದ ವಿಚಾರದಲ್ಲಿ ನಿರಂತರ ಕಿರುಕುಳ ಹಾಗೂ ಬೆದರಿಕೆ ಎದುರಿಸಿದ ಪ್ರಣೀತ್ ಅವರು ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಬಿಎನ್‌ಎಸ್-2023ರ ಕಲಂ 308(3), 351(2) ಸಹಿತ 3(5) ಹಾಗೂ ಕರ್ನಾಟಕ ವಿಪರೀತ ಬಡ್ಡಿ ವಿಧಿಸುವಿಕೆ ತಡೆ ಕಾಯ್ದೆ-2004ರ ಕಲಂ 3 ಮತ್ತು 4ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




