ಕಾರವಾರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್‌ಐಆರ್) ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಉತ್ತರ ಕನ್ನಡ ಹಾಗೂ ನಗರಸಭೆ ಕಾರವಾರದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಸಂಜೆ ನಗರಸಭೆ ಆವರಣದಲ್ಲಿ ಪಂಜಿನ ಮೆರವಣಿಗೆ ಆಯೋಜಿಸಲಾಯಿತು.
ಕಾರ್ಯಕ್ರಮಕ್ಕೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಜಹೀರ್ ಅಬ್ಬಾಸ್ ಚಾಲನೆ ನೀಡಿದರು. ನಗರಸಭೆ ಪೌರಾಯುಕ್ತ ಜಗದೀಶ್ ಹುಲಗಜ್ಜಿ, ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆರವಣಿಗೆಯಲ್ಲಿ ಭಾಗವಹಿಸಿದರು. ನಗರಸಭೆ ಆವರಣದಿಂದ ಆರಂಭವಾದ ಪಂಜಿನ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ, ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು.
ಇದೇ ವೇಳೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಅವರು ಜಿಲ್ಲೆಯ ಎಸ್‌ಐಆರ್ ಪ್ರಗತಿ ಕುರಿತು ಮಾಹಿತಿ ನೀಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ-2026 ಕಾರ್ಯ ಚುರುಕಿನಿಂದ ಸಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ರೆಡ್ ಅಲರ್ಟ್: ಜಿಲ್ಲೆಯ ಐದು ತಾಲೂಕುಗಳ ಶಾಲೆ, ಅಂಗನವಾಡಿಗಳಿಗೆ ನಾಳೆ ರಜೆ
ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, ಇದುವರೆಗೆ 11,58,776 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ. ಮನೆ-ಮನೆಗೆ ಭೇಟಿ ನೀಡಿ ಒಟ್ಟು 11,54,356 ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸಲಾಗಿದ್ದು, ಅವುಗಳಲ್ಲಿ 40,401 ಫಾರ್ಮ್‌ಗಳನ್ನು ಗಣಕೀಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಮನೆ-ಮನೆ ಭೇಟಿ ವೇಳೆ ಮತದಾರರ ಪಟ್ಟಿಯ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 811 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 103 ಶಾಶ್ವತ ವಲಸೆ, 656 ಮರಣ ಹೊಂದಿದ ಮತದಾರರು ಹಾಗೂ 47 ದ್ವಿಪ್ರತಿ ಮತದಾರರ ಪ್ರಕರಣಗಳು ಸೇರಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮತದಾರರ ಪಟ್ಟಿಯನ್ನು ನಿಖರ ಹಾಗೂ ದೋಷರಹಿತವಾಗಿಸುವ ಉದ್ದೇಶದಿಂದ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಿ, ಎನ್ಯುಮರೇಷನ್ ಫಾರ್ಮ್‌ಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.




