ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ತುಮಕೂರು ಉಪವಿಭಾಗದ ವತಿಯಿಂದ ನಗರದ ಎನ್.ಆರ್. ಕಾಲೋನಿಯಲ್ಲಿ ಭಾರತದ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ಅವರ 40ನೇ ಪುಣ್ಯಸ್ಮರಣೆ ಅಂಗವಾಗಿ ಟೈಲರಿಂಗ್ ತರಬೇತಿ ಹಾಗೂ ಜನಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಶ್ರೀ ದುರ್ಗಮ್ಮ ದೇವಸ್ಥಾನದ ಸಮೀಪದ ಸಮುದಾಯ ಭವನದಲ್ಲಿ ಆರಂಭಗೊಂಡ ಟೈಲರಿಂಗ್ ತರಬೇತಿ ಕೇಂದ್ರವನ್ನು ಸಹಾಯಕ ಕಾರ್ಯಪಾಲಕ ಅಭಿಯಂತರ ಭಾನುಪ್ರತಾಪ್ ಸಿಂಹ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕೌಶಲ್ಯ ಆಧಾರಿತ ತರಬೇತಿಗಳು ಸ್ಲಂ ಪ್ರದೇಶದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ನೆರವಾಗಲಿವೆ ಎಂದು ಹೇಳಿದರು.
ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಮಾತನಾಡಿ, ರಾಜ್ಯದಲ್ಲಿ ಸ್ಲಂಗಳ ಮರುಅಭಿವೃದ್ಧಿಗೆ ಮುಂಬೈ ಮಾದರಿಯ ಯೋಜನೆ ಜಾರಿಗೊಳಿಸುವ ಚಿಂತನೆ ಕರ್ನಾಟಕಕ್ಕೆ ಅವೈಜ್ಞಾನಿಕವಾಗಿದ್ದು, ಇದು ಸ್ಲಂ ನಿವಾಸಿಗಳ ಹಿತಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಸ್ಲಂ ಅಭಿವೃದ್ಧಿಯನ್ನು ಕೇವಲ ಮನೆ ನಿರ್ಮಾಣಕ್ಕೆ ಸೀಮಿತಗೊಳಿಸದೆ ಆರೋಗ್ಯ, ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಬೇಕು. ಖಾಸಗಿ–ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿ ಮಾಡುವ ಮೂಲಕ ಬಡವರ ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಒಪ್ಪಿಸುವ ಕ್ರಮವನ್ನು ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದರು.
2023ರ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಸ್ಲಂ ನಿವಾಸಿಗಳಿಗೆ ಉಚಿತ ಮನೆಗಳನ್ನು ಒದಗಿಸಲು ವಸತಿ ಹಕ್ಕು ಜಾರಿಗೊಳಿಸಿ, ಲ್ಯಾಂಡ್ ಬ್ಯಾಂಕ್ ನೀತಿಯನ್ನು ಅನುಷ್ಠಾನಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.
ಟೈಲರಿಂಗ್ ತರಬೇತಿ ಕೇಂದ್ರದ ನಿರ್ದೇಶಕ ರಾಘವೇಂದ್ರ ಮಾತನಾಡಿ, ಎನ್.ಆರ್. ಕಾಲೋನಿಯ 100 ಮಹಿಳೆಯರಿಗೆ ಎರಡು ಬ್ಯಾಚ್‌ಗಳಲ್ಲಿ 30 ದಿನಗಳ ಉಚಿತ ಟೈಲರಿಂಗ್ ತರಬೇತಿ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಜಾಗೃತಿ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಗಳನ್ನೂ ಐಇಸಿ ಕಾರ್ಯಕ್ರಮದಡಿ ಆಯೋಜಿಸಲಾಗುವುದು ಎಂದರು.
ತುಮಕೂರು ಸ್ಲಂ ಸಮಿತಿಯ ಕಾರ್ಯದರ್ಶಿ ಅರುಣ್ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸುವ ಮಹಿಳೆಯರಿಗೆ ತರಬೇತಿ ಭತ್ಯೆ ನೀಡಬೇಕು ಹಾಗೂ ಹಕ್ಕುಪತ್ರ ನೋಂದಣಿ ಪ್ರಕ್ರಿಯೆಯನ್ನು ಶೀಘ್ರ ಕೈಗೆತ್ತಿಕೊಳ್ಳಬೇಕು ಎಂದು ಮಂಡಳಿಯನ್ನು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಸ್ಲಂ ಬೋರ್ಡ್ ಅಧೀಕ್ಷಕ ಜಗದೀಶ್, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯ ಸಂಚಾಲಕಿ ಅನುಪಮಾ, ತುಮಕೂರು ಸ್ಲಂ ಸಮಿತಿಯ ಶಂಕ್ರಯ್ಯ, ಮೋಹನ್ ಟಿ.ಆರ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.




