ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿರುವ ಆರ್‌ಟಿಒ ಕಚೇರಿ ಆವರಣದಲ್ಲಿ ₹4.30 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸೆನ್ಸಾರ್ ಟೆಸ್ಟಿಂಗ್ ಟ್ರಾಕ್ ಕಾಮಗಾರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ಹಿಂದಿನ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರ ಗಮನಕ್ಕೆ ಕೊಡಗು ಜಿಲ್ಲೆಯ ವಾಹನ ಚಾಲನಾ ಪರವಾನಗಿ ಪಡೆಯುವ ಅಭ್ಯರ್ಥಿಗಳು ಕಚ್ಚಾ ರಸ್ತೆಯಲ್ಲಿ ಟೆಸ್ಟಿಂಗ್ ರೈಡ್ ನಡೆಸುವಾಗ ಎದುರಿಸುತ್ತಿದ್ದ ಸಮಸ್ಯೆಗಳನ್ನು ತಂದಿದ್ದಾಗಿ ತಿಳಿಸಿದರು. ಅದರಂತೆ ಆಧುನಿಕ ಸೆನ್ಸಾರ್ ಟೆಸ್ಟಿಂಗ್ ಟ್ರಾಕ್ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿದ್ದು, ಸಾರಿಗೆ ಇಲಾಖೆಯಿಂದ ಅನುದಾನ ಬಿಡುಗಡೆಯಾಯಿತು. ಬಳಿಕ ಹಾಲಿ ಸಾರಿಗೆ ಸಚಿವ ಬೈರತಿ ಸುರೇಶ್ ಅವರು ತಾಂತ್ರಿಕ ಹಾಗೂ ಆರ್ಥಿಕ ಅನುಮೋದನೆ ನೀಡಿ ಯೋಜನೆಗೆ ಸಹಕಾರ ನೀಡಿದ್ದಾರೆ ಎಂದು ವಿವರಿಸಿದರು.
‘ಕೆ.ಎ.-12’ ಎನ್ನುವುದು ಕೇವಲ ವಾಹನ ನೋಂದಣಿ ಸಂಖ್ಯೆಯಲ್ಲ; ಅದು ಕೊಡಗಿನ ಘನತೆ ಹಾಗೂ ಗೌರವವನ್ನು ಪ್ರತಿಬಿಂಬಿಸುವ ಸಂಕೇತವಾಗಿದೆ. ಇಂತಹ ಆರ್‌ಟಿಒ ಕಚೇರಿಗೆ ಸುಸಜ್ಜಿತ ಟೆಸ್ಟಿಂಗ್ ಟ್ರಾಕ್ ನಿರ್ಮಾಣಕ್ಕೆ ಅನುದಾನ ದೊರೆತಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಟಿ. ಸತೀಶ್ ಮಾತನಾಡಿ, ಶಾಸಕ ಡಾ. ಮಂತರ್ ಗೌಡ ಅವರ ವಿಶೇಷ ಪ್ರಯತ್ನದಿಂದ ಮಡಿಕೇರಿ ಆರ್‌ಟಿಒ ಕಚೇರಿಗೆ ಈ ಮಹತ್ವದ ಅನುದಾನ ದೊರೆತಿದ್ದು, ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ಸಮರ್ಪಕವಾಗಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಶಾಸಕ ಡಾ. ಮಂತರ್ ಗೌಡ ಅವರು ವಿವಿಧ ಇಲಾಖೆಗಳ ಮೂಲಕ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?ಕೆ ಆರ್ ನಗರ | ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ನಿಸ್ವಾರ್ಥ ಸೇವೆ ಸಲ್ಲಿಸಿ: ಕೆ. ದೀಪಕ್ ಕರೆ
ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷ ರಾಜೇಶ್ ಯಲ್ಲಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎ. ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ, ಆರ್‌ಟಿಒ ಸೂಪರಿಂಟೆಂಡೆಂಟ್ ಸಲೀಮಾ, ಇನ್ಸ್‌ಪೆಕ್ಟರ್‌ಗಳಾದ ಮೋಹನ್ ಕುಮಾರ್ ಹಾಗೂ ಪ್ರದೀಪ್ ಕುಮಾರ್, ಸಿಬ್ಬಂದಿಗಳಾದ ರಾಧಾ, ಮಹದೇವಸ್ವಾಮಿ, ಸಂತೋಷ್ ಕುಮಾರ್, ಶೈಲೇಶ್, ರೀಟಾ, ಸ್ಲೀಮನ್ ಕುಮಾರ್, ಸೌಮ್ಯ ಹಾಗೂ ಪ್ರಮುಖರಾದ ಜಾನ್ಸನ್ ಪಿಂಟೋ, ವಿ.ಜಿ. ಮೋಹನ್, ಕೋಚನ ಹರಿಪ್ರಸಾದ್, ಮಂಡಿರ ಸದಾ ಮುದ್ದಪ್ಪ, ಜಿ.ಸಿ. ಜಗದೀಶ್, ಕೋಚನ ಚೇತನ್, ನಂದಿನೆರವಂಡ ಮಧು, ಶಶಿ, ಕೊತ್ತೋಳಿ ಕವನ್, ಅರ್ಜುನ್, ಚರಣ್ ಸೇರಿದಂತೆ ಸಾರ್ವಜನಿಕರು ಇದ್ದರು.




