ಬೇತಮಂಗಲ ಗ್ರಾಮದ ಗ್ರಾಮೀಣ ಪ್ರೌಢಶಾಲೆ ಮುಂಭಾಗದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ, ನೆನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದ ಕೊಳಚೆ ನೀರು ರಸ್ತೆಯ ಬದಿಯಲ್ಲಿ ನಿಂತು ಶಾಲಾ ಆವರಣದತ್ತ ಹರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯ ಮುಂಭಾಗದಲ್ಲಿರುವ ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದೆ, ಮಳೆನೀರು ಮತ್ತು ಕೊಳಚೆ ನೀರು ಒಂದೆಡೆ ಸಂಗ್ರಹವಾಗಿದೆ. ಜೊತೆಗೆ ಚರಂಡಿಯಲ್ಲಿ ಕಸ, ಒಣ ಎಲೆಗಳು ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ತುಂಬಿಕೊಂಡಿರುವುದು ಕಂಡುಬರುತ್ತಿದೆ. ಇದರಿಂದ ದುರ್ವಾಸನೆ ಬೀರುತ್ತಿದ್ದು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ರಸ್ತೆ ದಾಟಬೇಕಾದ ಪರಿಸ್ಥಿತಿ ಎದುರಾಗಿದೆ.
ಚರಂಡಿಯಲ್ಲಿ, ನೀರು ನಿಂತಿದ್ದು, ಈ ಸ್ಥಳದಲ್ಲಿ ಕಸ-ತ್ಯಾಜ್ಯವೂ ಸೇರಿಕೊಂಡಿದ್ದು, ನೀರು ಹರಿಯುವ ಮಾರ್ಗಕ್ಕೂ ಅಡ್ಡಿಯಾಗಿರುವುದು ಗೋಚರಿಸುತ್ತದೆ. ಇದರಿಂದ ಮಳೆ ಮುಂದುವರಿದರೆ ಸಮಸ್ಯೆ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.
ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಆತಂಕ
ಶಾಲೆಯ ಮುಂಭಾಗದಲ್ಲೇ ಕೊಳಚೆ ನೀರು ನಿಂತಿರುವುದರಿಂದ ಸೊಳ್ಳೆ ಹಾಗೂ ಇತರೆ ಕೀಟಗಳ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಪ್ರತಿನಿತ್ಯ ಇದೇ ಮಾರ್ಗದಲ್ಲಿ ನೂರಾರು ವಿದ್ಯಾರ್ಥಿಗಳು ಸಂಚರಿಸುವುದರಿಂದ, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನು ಓದಿದ್ದೀರಾ..?ಚಿಂತಾಮಣಿಯಲ್ಲಿ ತಡರಾತ್ರಿ ಭಾರಿ ಗಾಳಿ-ಮಳೆಗೆ ಧರೆಗುರುಳಿದ ಶತಮಾನದ ಆಲದ ಮರ: ತಪ್ಪಿದ ಭಾರಿ ಅನಾಹುತ!
ಶಾಶ್ವತ ಪರಿಹಾರಕ್ಕೆ ಆಗ್ರಹ
ಶಾಲೆಯ ಮುಂಭಾಗದಲ್ಲಿ ಸೂಕ್ತ ಚರಂಡಿ ನಿರ್ಮಿಸಿ, ಈಗಾಗಲೇ ನಿಂತಿರುವ ಕೊಳಚೆ ನೀರನ್ನು ತೆರವುಗೊಳಿಸಬೇಕು. ಚರಂಡಿಯಲ್ಲಿರುವ ಕಸ-ಕಡ್ಡಿಗಳನ್ನು ತೆರವುಗೊಳಿಸಿ, ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.




