ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ಧಿಗೆ ಅಗತ್ಯವಿರುವ 100 ಎಕರೆ ಸರ್ಕಾರಿ ಜಮೀನಿನ ಕಡತಕ್ಕೆ ಶೀಘ್ರ ಅನುಮೋದನೆ ದೊರೆಯುವಂತೆ ಮೂರು ದಿನಗಳ ವಿಶೇಷ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ನಗರದಲ್ಲಿ ಮಾತನಾಡಿದ ಅವರು, ಬರ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಲಾಗಿದೆ. ಈ ಸಂದರ್ಭದಲ್ಲಿ ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆಯ ಜಾಗದ ಸಮಸ್ಯೆಯನ್ನು ಪ್ರಸ್ತಾಪಿಸಿ, ಕಡತಕ್ಕೆ ಅನುಮೋದನೆ ದೊರೆಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಕೊತ್ತೂರು ಜಿ.ಮಂಜುನಾಥ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್‌ಕುಮಾರ್ ಸರ್ಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು.
ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಮಾರುಕಟ್ಟೆ ಎಂಬ ಹೆಗ್ಗಳಿಕೆ ಹೊಂದಿರುವ ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆ ಲಕ್ಷಾಂತರ ರೈತರ ಜೀವನಾಡಿಯಾಗಿದೆ. ಇಲ್ಲಿಂದ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಗೆ ಟೊಮೆಟೊ ಸೇರಿದಂತೆ ಹಲವು ಕೃಷಿ ಉತ್ಪನ್ನಗಳು ರಫ್ತಾಗುತ್ತಿವೆ. ಮಾರುಕಟ್ಟೆಯ ವಿಸ್ತರಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ 100 ಎಕರೆ ಸರ್ಕಾರಿ ಜಮೀನು ಗುರುತಿಸುವಂತೆ ಕಳೆದ ಹತ್ತು ವರ್ಷಗಳಿಂದ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುತ್ತಿದೆ. ಆದರೆ ಈವರೆಗೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೋನೆಪುರ ಹಾಗೂ ಕಲ್ಲಂಡೂರು ಗ್ರಾಮದ ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ 65 ಎಕರೆ ಗೋಮಾಳ ಹಾಗೂ 35 ಎಕರೆ ಅರಣ್ಯ ಭೂಮಿ ಇರುವ ಕುರಿತು ತಕರಾರು ಇದೆ. ಈ ಕುರಿತು ಜಿಲ್ಲಾಧಿಕಾರಿಗಳು ಸರ್ಕಾರ ಹಾಗೂ ಕಂದಾಯ ಸಚಿವರಿಗೆ ವರದಿ ಸಲ್ಲಿಸಿದ್ದು, ಜಮೀನು ಮಂಜೂರಾತಿಗೆ ಸಚಿವ ಸಂಪುಟದ ಅನುಮೋದನೆ ಅಗತ್ಯವಿದೆ ಎಂದು ತಿಳಿಸಿದರು.
ಯುವ ರೈತ ಮುಖಂಡ ಯಾರಂಘಟ್ಟ ಗಿರೀಶ್ ಮಾತನಾಡಿ, ವಿಶೇಷ ಅಧಿವೇಶನದಲ್ಲಿ ಮಾರುಕಟ್ಟೆ ಜಾಗದ ವಿಚಾರವನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರ ಗಮನಕ್ಕೆ ತರಬೇಕು. ಕಡತಕ್ಕೆ ಅನುಮೋದನೆ ದೊರೆತ 30 ದಿನಗಳೊಳಗೆ ಮಾರುಕಟ್ಟೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನೆರವೇರಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಮಾಲೂರು | ನೈಸ್ ಟೋಲ್ ಅಕ್ರಮ – 7 ದಿನದಲ್ಲಿ ಸ್ಫೋಟಕ ಸತ್ಯ ಬಹಿರಂಗವಾಗುತ್ತೆ
ಯುವ ರೈತ ಮುಖಂಡ ನಲ್ಲಾಂಡ ಕೇಶವ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಯಲ್ಲಣ್ಣ, ಕೇಶವ, ರಾಮಸಾಗರ ವೇಣುಗೋಪಾಲ್, ಸುರೇಶ್ ಬಾಬು, ತಿಮ್ಮಣ್ಣ, ಅಶ್ವತ್ಥಪ್ಪ, ವೆಂಕಟೇಶಪ್ಪ, ದಾನವಹಳ್ಳಿ ಹರೀಶ್ ಇದ್ದರು.




