ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಒಂದು ತಿಂಗಳು ಕಾಲ ಬರದಂತೆ ಅಲ್ಲಿನ ಜಿಲ್ಲಾಡಳಿತ ನಿರ್ಬಂಧ ಮಾಡಿರುವ ಆದೇಶವನ್ನು ಕೂಡಲೇ ಹಿಂಪಡೆದು, ತಾಲೂಕಿನ ಭಾಗೇಪಲ್ಲಿಯಲ್ಲಿ ಹೋರಾಟ ಮಾಡಲು ಅನುವು ಮಾಡಿಕೊಡಬೇಕು ಎಂದು ಹಿರಿಯದಲಿತ ಮುಖಂಡ ದಲಿತ್ ನಾರಾಯಣಸ್ವಾಮಿ ಒತ್ತಾಯಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಗೇಪಲ್ಲಿ ತಾಲೂಕಿನ ಶಾಸಕ ಸುಬ್ಬಾರೆಡ್ಡಿಯ ವಿರುದ್ಧ ಸಂದೇಶ್ ಭೂ ಮಾಫಿಯಾ ಆರೋಪ ಮಾಡಿ ಹೋರಾಟ ನಡೆಸುತ್ತಿರುವುದನ್ನು ಅಲ್ಲಿನ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಒಂದು ತಿಂಗಳು ಕಾಲ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆ.ಎಂ.ಸಂದೇಶ್ ಚಿಕ್ಕಬಳ್ಳಾಪುರ ಜಿಲ್ಲೆಗೆ ಬರದಂತೆ ನಿರ್ಬಂಧ ಏರಿದ್ದಾರೆ ಇದು ಮಾನವ ಹಕ್ಕಿಗೆ ಮಾಡಿರುವ ದ್ರೋಹವೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಂದೇಶ್ ಹುಟ್ಟು ಹೋರಾಟಗಾರ, ಸಾವಿರಾರು ಎಕರೆಯಷ್ಟು ಸರ್ಕಾರ ಜಾಗಗಳನ್ನು ಭೂಗಳ್ಳರಿಂದ ಉಳಿಸಿ ಸರ್ಕಾರಕ್ಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಭೂ ಮಾಫಿಯಾ ವಿರುದ್ಧ ನಿರಂತರ ಹೋರಾಟಗಳನ್ನು ಮಾಡಿಕೊಂಡು ಬಡವರಿಗೆ ಶೋಷಿತರಿಗೆ ಧ್ವನಿಯಾಗಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಸಂದೇಶ್ ಅವರ ಪ್ರತಿಯೊಂದು ಹೋರಾಟಕ್ಕೂ ದಲಿತ ಸಂಘಟನೆಗಳು ಬೆಂಬಲ ನೀಡುತ್ತಿದೆ ಎಂದರು.
ಶಾಸಕ ಸುಬ್ಬಾರೆಡ್ಡಿ ಮಾಡಿರುವ ಭೂ ಕಬಳಿಕೆ ವಿರುದ್ಧ ಸಂದೇಶ್ ಹೋರಾಟ ಮಾಡುತ್ತಿದ್ದಾರೆ. ಇದನ್ನು ಸಹಿಸದ ಶಾಸಕರು ಸರ್ಕಾರ ಮಟ್ಟದಲ್ಲಿ ಒತ್ತಡ ತಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಬರದಂತೆ ನಿರ್ಬಂಧ ಮಾಡುವಂತೆ ಆದೇಶ ತಂದಿದ್ದಾರೆ. ನಿಜವಾಗಿ ಶಾಸಕರು ತಮ್ಮ ಆತ್ಮ ಶುದ್ಧಿ ಇದ್ದರೆ, ಭೂ ಕಬಳಿಕೆ ಮಾಡದಿದ್ದರೆ ಸಂದೇಶ್ ಅವರ ಮೇಲೆ ನಿರ್ಬಂಧ ಆದೇಶ ಹೊರಡಿಸಿರುವುದು ಎಷ್ಟು ಮಟ್ಟಿಗೆ ಸರಿ. ಈ ಘಟನೆ ಕಂಡರೆ ಭೂಕಬಳಿಕೆ ಮಾಡಿರುವುದು ಸತ್ಯವೆಂದು ಸಾರ್ವಜನಿಕರಿಗೆ ಗೊತ್ತಾಗಿದೆ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಡಳಿತ ನಿರ್ಬಂಧದ ಆದೇಶ ಹಿಂಪಡೆದು ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥಾಪಕ ಕೆಎಂ ಸಂದೇಶ್ ಅವರು ಹೋರಾಟ ಮಾಡಲು ಅನುವು ಮಾಡಿಕೊಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಯಾರು ಭೂಕಬಳಿಕೆ ಮಾಡಿದ್ದಾರೋ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಕೆಜಿಎಫ್ ನಲ್ಲಿ ರಾಜಕೀಯ ಜಟಾಪಟಿ: ಶಾಸಕಿ ವಿರುದ್ಧ ಮಾಜಿ ಶಾಸಕ ಸಂಪಂಗಿ ಬೃಹತ್ ಧರಣಿ
ಈ ಸಂದರ್ಭದಲ್ಲಿ ಮುತ್ತಿಕುಂಟೆ ಕೃಷ್ಣ, ಲಾಯರ್ ಅಂಬರೀಷ್, ಚದುಮನಹಳ್ಳಿ ಶ್ರೀರಾಮ, ಅಂಬೇಡ್ಕರ್ ನಗರ ಗಿರಿಜಮ್ಮ, ಗಾಂಧಿನಗರ ಲಕ್ಷ್ಮಣ, ಅರಳಿಕುಂಟೆ ರಾಜು, ಮೆಕಾನಿಕ್ ನಾರಾಯಣಸ್ವಾಮಿ, ಬಂಗಾರಪೇಟೆ ಅನೀಲ್ ಕುಮಾರ್ ಉಪಸ್ಥಿತರಿದ್ದರು




