ಜುಲೈನಿಂದ ದೇಶಾದ್ಯಂತ ಮುಂಗಾರು ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತಗಳಿಂದಾಗಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಸಾವಿರಾರು ಜನರು ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ ಎಂದು ಬುಧವಾರ ಅಧಿಕೃತ ಅಂಕಿಅಂಶಗಳು ಹೇಳಿವೆ.
ವಾರ್ಷಿಕ ಮುಂಗಾರು ರೈತರು ಅವಲಂಬಿಸಿರುವ ಮಳೆಯನ್ನು ತರುತ್ತಿದ್ದರೂ, ಹವಾಮಾನ ಬದಲಾವಣೆಯು ದಕ್ಷಿಣ ಏಷ್ಯಾ ಪ್ರದೇಶದಾದ್ಯಂತ ಈ ವಿದ್ಯಮಾನವನ್ನು ಹೆಚ್ಚು ಅನಿಯಮಿತ, ಅನಿರೀಕ್ಷಿತ ಮತ್ತು ಮಾರಕವಾಗಿಸಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ.
ಇದನ್ನೂ ಓದಿ: ಭಾರೀ ಮಳೆ | ಗುಜರಾತಿನಲ್ಲಿ ಪ್ರವಾಹ, ಕಾನ್ಪುರದಲ್ಲಿ 56 ವರ್ಷಗಳ ದಾಖಲೆ ಮುರಿದ ವರ್ಷಧಾರೆ
ದೇಶದ ಈಶಾನ್ಯ ರಾಜ್ಯವಾದ ಅಸ್ಸಾಂ ವಾರ್ಷಿಕ ಮಳೆಯಿಂದ ಹೆಚ್ಚು ಹಾನಿಗೊಳಗಾಗಿದೆ. ಕನಿಷ್ಠ 87 ಮಂದಿ ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಶಿವಸಾಗರ್ ಜಿಲ್ಲೆಯಲ್ಲಿ, ಹಲವಾರು ಪ್ರದೇಶಗಳು ನೀರಿನಿಂದ ಆವೃತ್ತವಾಗಿದ್ದು 47 ಮಂದಿ ಸಾವನ್ನಪ್ಪಿದ್ದಾರೆ.
ಈ ನಡುವೆ ಅಸ್ಸಾಂ ಅನ್ನು ಪ್ರವಾಹ ಮುಕ್ತವಾಗಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಭರವಸೆಯ ವಿಡಿಯೋವೂ ತೀವ್ರ ವೈರಲ್ ಆಗುತ್ತಿದೆ. ಅಸ್ಸಾಂನಲ್ಲಿ ಪ್ರತಿವರ್ಷ ಸಂಭವಿಸುವ ಪ್ರವಾಹಕ್ಕೆ ಶಾಶ್ವತ ಪರಿಹಾರ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಇನ್ನೊಂದೆಡೆ ದಕ್ಷಿಣ ರಾಜ್ಯವಾದ ಕೇರಳದಲ್ಲಿ, ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಏಳು ಜನರು ಕಾಣೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ಹೇಳಿದ್ದಾರೆ. ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ, ನದಿಗಳು ಉಕ್ಕಿ ಹರಿದಿದೆ. ರಾಜ್ಯದಲ್ಲಿ 300 ಕ್ಕೂ ಹೆಚ್ಚು ಪರಿಹಾರ ಶಿಬಿರಗಳನ್ನು ಸ್ಥಾಪಿಸಲಾಗಿದ್ದು, 10,000 ಕ್ಕೂ ಹೆಚ್ಚು ಜನರಿಗೆ ಆಶ್ರಯ ನೀಡಲಾಗಿದೆ.
ಇನ್ನೊಂದೆಡೆ ಜಮ್ಮು ಮತ್ತು ಕಾಶ್ಮೀರದ ಹಿಮಾಲಯ ಪ್ರದೇಶದಲ್ಲಿ, ಅತ್ಯಂತ ತೀವ್ರವಾದ ಮಳೆಯ ಹಲವಾರು ಸಣ್ಣ ಸ್ಫೋಟಗಳಲ್ಲಿ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯ ಪ್ರದೇಶದಲ್ಲಿ ಸುಮಾರು 12,000 ಮಂದಿ ತಮ್ಮ ಮನೆಯನ್ನು ಕಳೆದುಕೊಂಡಿದ್ದಾರೆ.




