ಕೋಲಾರದ ರೈತರು ಮತ್ತು ಒಕ್ಕಲಿಗ ಸಮುದಾಯದವರು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಇಲ್ಲಿ ಹಮ್ಮಿಕೊಂಡಿರುವ ಕೆಂಪೇಗೌಡ ಜಯಂತಿ ಆಚರಣೆಯು ನಾಡಿಗೆ ಒಂದು ಉತ್ತಮ ದಿಕ್ಸೂಚಿಯಾಗಿದೆ. ಬೆಂಗಳೂರು ಇಂದು ಜಾಗತಿಕ ಮಟ್ಟದಲ್ಲಿ ಬೆಳಗಲು ಕಾರಣಕರ್ತರಾದ ಕೆಂಪೇಗೌಡರು, ನಾಡಿನ ಅಭಿವೃದ್ಧಿಯ ನಿಜವಾದ ಹರಿಕಾರರಾಗಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಂದನಾಥ ಸ್ವಾಮೀಜಿ ಬಣ್ಣಿಸಿದರು.
ನಗರದ ಎಸ್.ಎನ್.ಆರ್. ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಜಿಲ್ಲಾ ಒಕ್ಕಲಿಗರ ಸಂಘ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ೫೧೭ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕಲಿಗ ಸಂಘದ ಜಿಲ್ಲಾಧ್ಯಕ್ಷ ಹಾಗೂ ಹಿರಿಯ ವಕೀಲರಾದ ಕೆ.ವಿ. ಶಂಕರಪ್ಪ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ಆಡಳಿತಗಾರರಲ್ಲ. ಅವರು ಎಲ್ಲಾ ಸಮುದಾಯಗಳ ಹಾಗೂ ಎಲ್ಲಾ ರಂಗಗಳ ಅಭಿವೃದ್ಧಿಗೆ ಶ್ರಮಿಸಿದ ಧೀಮಂತ ನಾಯಕರಾಗಿದ್ದಾರೆ. ಅವರ ಆದರ್ಶಗಳು ನಮಗೆ ಸದಾ ದಾರಿ ದೀಪ ಎಂದು ಅಭಿಪ್ರಾಯಪಟ್ಟರು.
ವೇದಿಕೆ ಕಾರ್ಯಕ್ರಮದ ನಂತರ ಗಣ್ಯರು ಹಸಿರು ನಿಶಾನೆ ತೋರುವ ಮೂಲಕ ಸ್ತಬ್ಧಚಿತ್ರಗಳ ಮೆರವಣಿಗೆಗೆ ಚಾಲನೆ ನೀಡಿದರು. ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ನೂರಾರು ಸ್ತಬ್ಧಚಿತ್ರಗಳ ಭವ್ಯ ಮೆರವಣಿಗೆಯು ಕೆಂಪೇಗೌಡರ ೫೧೭ನೇ ಜಯಂತಿಯ ವೈಭವಕ್ಕೆ ಸಾಕ್ಷಿಯಾಯಿತು.
ಮೆರವಣಿಗೆಯಲ್ಲಿ ರೈತರಿಂದ ವಿಶೇಷ ನೃತ್ಯ, ಡೊಳ್ಳು ಕುಣಿತ ಹಾಗೂ ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಸಾರ್ವಜನಿಕರ ಗಮನ ಸೆಳೆದವು. ಯುವಕರು ತಮಟೆಯ ಸದ್ದಿಗೆ ಮನಸೋತು ಕುಣಿದು ಕುಪ್ಪಳಿಸಿದರು.
ಉತ್ಸವದ ಸಡಗರವನ್ನು ಹೆಚ್ಚಿಸಲು ಹಾಸನ ಜಿಲ್ಲೆಯ ಅರಸೀಕೆರೆಯಿಂದ ವಿಶೇಷವಾಗಿ ರೈತರ ಕಲಾತಂಡವನ್ನು ಕರೆಸಲಾಗಿತ್ತು. ಮೆರವಣಿಗೆ ಯುದ್ದಕ್ಕೂ ನಡೆದ ಇವರ ಸಾಂಪ್ರದಾಯಿಕ ನೃತ್ಯ ಪ್ರದರ್ಶನ ಎಲ್ಲರ ಮನಗೆದ್ದಿತು.
ಹಬ್ಬದ ವಾತಾವರಣ ನಿರ್ಮಾಣವಾಗಿದ್ದರಿಂದ, ಮೆರವಣಿಗೆಯ ಮಾರ್ಗದುದ್ದಕ್ಕೂ ದಾನಿಗಳು ಸಾರ್ವಜನಿಕರಿಗೆ ಅನ್ನದಾನ, ಮಜ್ಜಿಗೆ ಹಾಗೂ ಪಾನಕ ವಿತರಿಸಿ ಸತ್ಕರಿಸಿದರು.
ಸಾಂಪ್ರದಾಯಿಕ ಎತ್ತಿನಗಾಡಿಗಳನ್ನು ಮೆರವಣಿಗೆಯಲ್ಲಿ ಬಳಸಿದ್ದು ಈ ಬಾರಿಯ ಉತ್ಸವದ ಪ್ರಮುಖ ವಿಶೇಷವಾಗಿತ್ತು. ಆದರೆ, ಜನರ ಸಡಗರ ಮತ್ತು ಮೆರವಣಿಗೆಯ ಭಾರಿ ಶಬ್ದದ ನಡುವೆ ಗಾಡಿಗಳಿಗೆ ಕಟ್ಟಲಾಗಿದ್ದ ಎತ್ತುಗಳು ಕೆಲಕಾಲ ಗಾಬರಿಗೊಂಡ ಘಟನೆಯೂ ನಡೆಯಿತು.
ಸುಮಾರು ನಾಲ್ಕೈದು ಗಂಟೆಗಳ ಕಾಲ ನಡೆದ ಈ ಭವ್ಯ ಮೆರವಣಿಗೆಯ ಹಿನ್ನೆಲೆಯಲ್ಲಿ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಯಿತು. ಬಂಗಾರಪೇಟೆ ವೃತ್ತದಿಂದ ಮಹಾತ್ಮ ಗಾಂಧಿ ರಸ್ತೆ ಹಾಗೂ ರಂಗಮಂದಿರ ರಸ್ತೆಯುದ್ದಕ್ಕೂ ಸಮುದಾಯದ ಯುವಕರು ಹಾಗೂ ಸಾರ್ವಜನಿಕರು ಸಾಗರೋಪಾದಿಯಲ್ಲಿ ಜಮಾಯಿಸಿದ್ದರು. ಒಟ್ಟಾರೆಯಾಗಿ ಇಡೀ ಕೋಲಾರ ನಗರವು ಕೆಂಪೇಗೌಡ ಜಯಂತಿಯ ಭಕ್ತಿ ಮತ್ತು ಸಾಂಸ್ಕೃತಿಕ ಸಂಭ್ರಮದಲ್ಲಿ ಮುಳುಗಿತ್ತು.
ಇದನ್ನು ಓದಿದ್ದೀರಾ..? ಕೋಲಾರ | ಕೇಂದ್ರದಂತೆ ರಾಜ್ಯ ಸರ್ಕಾರವು ಮಾವಿಗೆ ಬೆಂಬಲ ಬೆಲೆ ಘೋಷಣೆಗೆ ರೈತ ಸಂಘ ಒತ್ತಾಯ
ಕಾರ್ಯಕ್ರಮದಲ್ಲಿ ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್, ಮಾಜಿ ಸದಸ್ಯ ಇಂಚರ ಗೋವಿಂದರಾಜು, ಡಿಐಜಿಪಿ ಡಿ.ದೇವರಾಜ್, ಒಕ್ಕಲಿಗ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿಸಪ್ಪಗೌಡ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಕೋಮುಲ್ ನಿರ್ದೇಶಕರಾದ ಚೆಲುವನಹಳ್ಳಿ ನಾಗರಾಜ್, ಚಂಜಿಮಲೆ ರಮೇಶ್, ಜೆಡಿಎಸ್ ಮುಖಂಡ ಸಿಎಂಆರ್. ಶ್ರೀನಾಥ್, ಮುಖಂಡರಾದ ಮೈಲಾಂಡಹಳ್ಳಿ ಮುರಳಿ, ಲಕ್ಷ್ಮಣ್ ಗೌಡ, ಡಾ.ರಮೇಶ್, ಕುರ್ಕಿ ರಾಜೇಶ್ವರಿ ಖಾಜಿಕಲ್ಲಹಳ್ಳಿ ಮುನಿರಾಜು, ಕೃಷ್ಣಾರೆಡ್ಡಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಸ್.ಕೆ. ಚಂದ್ರಶೇಖರ್, ಪಾಲಾಕ್ಷಗೌಡ, ಖಾಜಿಕಲ್ಲಹಳ್ಳಿ ಹರೀಷ್, ಉಪವಿಭಾಗಾಧಿಕಾರಿ ರೇಣುಕಾ ಪ್ರಸಾದ್ ಜಂಬಗಿ, ತಹಶೀಲ್ದಾರ್ ಶ್ರೀನಿವಾಸ್ ಸೇರಿದಂತೆ ಒಕ್ಕಲಿಗ ಸಮುದಾಯದ ನಾಯಕರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.




