ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಾಳೆ ನಡೆಯಲಿರುವ ಬಸವಾದಿ ಶಿವರಣರ ಬೃಹತ್ ಹಿಂದೂ ಸಮಾವೇಶ ವಿರೋಧಿಸಿ ವಿವಿಧ ಬಸವಪರ ಸಂಘಟನೆಗಳ ಪ್ರಮುಖರು ನಾಳೆ (ಜೂ.28) ‘ಚಲೋ ಬಸವಕಲ್ಯಾಣ’ ಹೋರಾಟಕ್ಕೆ ಕರೆ ನೀಡಿದ್ದಾರೆ.
ಬಸವಕಲ್ಯಾಣದ ಸಸ್ತಾಪುರ ಬಂಗ್ಲಾದ ಬಸವೇಶ್ವರ ಮಹಾದ್ವಾರ ಸಮೀಪ ಬಸವಧರ್ಮ ಸಂರಕ್ಷಣಾ ಹೋರಾಟ ಸಮಿತಿಯ ಆರ್.ಜಿ.ಶೆಟಗಾರ, ಮೀನಾಕ್ಷಿ ಬಾಳಿ, ಕೆ.ನೀಲಾ, ಆರ್.ಕೆ.ಹುಡಗಿ ನೇತ್ರತ್ವದಲ್ಲಿ ನಾಳೆ ಬೆಳಿಗ್ಗೆ 10ಗಂಟೆಗೆ ನಡೆಯಲಿರುವ ಹೋರಾಟಕ್ಕೆ ಚಲೋ ಬಸವಕಲ್ಯಾಣ ಹೋರಾಟ ಸಮಿತಿ ಸಂಪೂರ್ಣವಾಗಿ ಬೆಂಬಲಿಸಿದೆ. ಈ ಹೋರಾಟದಲ್ಲಿ ಸಾವಿರಾರು ಯುವಕರು ಭಾಗವಹಿಸಲು ನಿರ್ಧರಿಸಿದೆ. ಸ್ಥಳೀಯ ಯುವಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಸಮಾನ ಮನಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
‘ಚಲೋ ಬಸವಕಲ್ಯಾಣ ಹೋರಾಟ ಸಮಿತಿ’ ಸಂಚಾಲಕ ಸಿದ್ದಪ್ಪ ಮೂಲಗೆ ಮಾತನಾಡಿ, “ಬಸವಾದಿ ಶರಣರ ಹಿಂದೂ ಸಮಾವೇಶ ವಿರುದ್ಧ ಬಸವಪರ ಸಂಘಟನೆಗಳ ಹಿರಿಯರು ಪ್ರತಿಭಟನೆ ರೂಪಿಸುತ್ತಾರೆ ಎಂದು ನಾವು ಸುಮ್ಮನಿದ್ದೆವು. ಮೊದಲ ಹೋರಾಟಕ್ಕೆ ಕರೆ ನೀಡಿ ಕೋರ್ಟ್ ತೀರ್ಪಿನ ಬಳಿಕ ನಿಗದಿಯಾದ ಹೋರಾಟ ಕೈಬಿಟ್ಟಿದ್ದಾರೆ. ಬಸವಕಲ್ಯಾಣದಲ್ಲಿ ಬಸವಣ್ಣನವರಿಗೆ ಅವಮಾನವಾಗುತ್ತಿರುವಾಗ ನಾವು ಮೌನವಹಿಸದೆ ಹೋರಾಟ ನಡೆಸಲು ನಿರ್ಧರಿಸಿದ್ದೇವೆ” ಎಂದರು.

“ಬಸವಾದಿ ಶಿವಶರಣ ಹೆಸರಿನಲ್ಲಿ ಹಿಂದೂ ಸಮಾವೇಶ ನಡೆಸುವ ವಿರುದ್ಧ ನಮ್ಮ ಹೋರಾಟವಾಗಿದೆ. ಇದು ಈಗಲೇ ವಿರೋಧಿಸದಿದ್ದರೆ ಅದು ಶಾಶ್ವತ ದಾಖಲೆಯಾಗಿ ಉಳಿಯುತ್ತದೆ. ಬಸವಣ್ಣನವರ ತತ್ವ ಹಾಗೂ ಹೆಸರನ್ನು ಯಾವುದೇ ರಾಜಕೀಯ ಅಥವಾ ಹಿಂದುತ್ವದ ವೇದಿಕೆಯೊಂದಿಗೆ ಜೋಡಿಸಲು ನಾವು ಅವಕಾಶ ನೀಡುವುದಿಲ್ಲ. ಇದುವರೆಗೆ ಹೋರಾಟದ ಮುಂಚೂಣಿಯಲ್ಲಿದ್ದ ಕೆಲವರು ತಮ್ಮ ವಿರೋಧವನ್ನು ನಿರ್ದಿಷ್ಟ ವ್ಯಕ್ತಿಗೆ ಮಾತ್ರ ಸೀಮಿತಗೊಳಿಸಿದ್ದರೆ, ನಮ್ಮ ಹೋರಾಟ ವ್ಯಕ್ತಿಯ ವಿರುದ್ಧವಲ್ಲ, ಸೈದ್ಧಾಂತಿಕ ನೆಲೆಯಲ್ಲಿ ನಡೆಯುತ್ತಿದೆ” ಎಂದು ಅವರು ಸ್ಪಷ್ಟಪಡಿಸಿದರು.

“ವ್ಯಕ್ತಿಗಳು ಬರುತ್ತಾರೆ, ಹೋಗುತ್ತಾರೆ. ಆದರೆ ಬಸವಣ್ಣನವರ ತತ್ವ ಮತ್ತು ಚಿಂತನೆಗೆ ಧಕ್ಕೆ ಬರುವ ಯಾವುದೇ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ. ನಮ್ಮ ವಿರೋಧ ಹಿಂದೂ ಸಮಾವೇಶದ ವಿರುದ್ಧವಾಗಿದೆ. ಈ ನಾಡಿನಲ್ಲಿ ಲಕ್ಷಾಂತರ ಬಸವ ಭಕ್ತರು ಇನ್ನೂ ಬದುಕಿದ್ದೇವೆ. ನಮ್ಮ ಮೈಯಲ್ಲಿ ಹರಿಯುತ್ತಿರುವುದು ಬಸವಣ್ಣನ ರಕ್ತ. ನಮ್ಮ ಕಣ್ಣೆದುರಿಗೆ ಬಸವ ನೆಲದಲ್ಲಿ ಬಸವಣ್ಣನವರಿಗೆ ಘೋರ ಅವಮಾನ ಆಗುತ್ತಿದೆ. ಇದು ನಾವು ಬದುಕಿದ್ದು ಸತ್ತಂತೆ. ಕೆಲವರು ಕ್ರೆಡಿಟ್ ಹಿಂದೆ ಬಿದ್ದಿದ್ದಾರೆ. ನಮಗೆ (ಯುವಕರಿಗೆ) ಯಾರ ಭಯವೂ ಇಲ್ಲ, ಯಾವ ಕ್ರೆಡಿಟ್ ಬೇಕಾಗಿಲ್ಲ. ನಮಗೆ ಬಸವಣ್ಣ ಮಾತ್ರ ಬೇಕು. ನಾಳೆಯ ಹೋರಾಟದಲ್ಲಿ ನಾಡಿನ ವಿವಿಧ ಜಿಲ್ಲೆಗಳಿಂದ ಬಸವ ಅನುಯಾಯಿಗಳು ಪಾಲ್ಗೊಳ್ಳಲಿದ್ದಾರೆ” ಎಂದು ತಿಳಿಸಿದರು.
ಇದನ್ನೂ ಓದಿ : ಆರ್‌ಎಸ್‌ಎಸ್ ಪಿಡುಗು ಈ ದೇಶಕ್ಕೆ ಅಂಟಿರುವ ಕ್ಯಾನ್ಸರ್, ಏಡ್ಸ್ : ಚಿಂತಕಿ ಮೀನಾಕ್ಷಿ ಬಾಳಿ
ಈ ಹೋರಾಟದ ಮುಂಚೂಣಿಯಲ್ಲಿ ಸಿದ್ದು ಶಟಕಾರ, ರವಿ ಪಾಪಡೆ, ಚನ್ನಬಸವ ಹಂಗರಗಿ, ಸುರೇಶ ಚನಶೆಟ್ಟಿ, ಶಿವಶರಣಪ್ಪ ಹುಗ್ಗೆ ಪಾಟೀಲ, ಜಗದೀಶ ಪಾಟೀಲ, ಪ್ರವೀಣ ಎಕಲಾರೆ, ನಿರಂಹಕಾರ ತುಪ್ಪದ, ರಾಜಕುಮಾರ ಪಾಟೀಲ, ಯೋಗೀಶ್ ಸಿರಿಗಿರೆ, ಬಸವ ಪಾಟೀಲ ಸೇರಿದಂತೆ ಹಲವು ಯುವ ಮುಖಂಡರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಹೋರಾಟಕ್ಕೆ ಕರೆ ನೀಡಿದ್ದಾರೆ.




