ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ಯರಾಮಡು, ಬೊಮ್ಮಸಾಗರ ತಾಂಡ ಇಂಗಳದಾಳ ಅಡಿವಿ, ಬಾಯ ತಾಂಡ ಸಾಗುವಳಿ ನಿವಾಸಿಗಳ ಸಾಗುವಳಿ ಭೂಮಿಯ ಮೇಲೆ ಅರಣ್ಯ ಅಧಿಕಾರಿಗಳ ಕಣ್ಣು ಬಿದ್ದಿದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮನ್ನು ಒಕ್ಕಲೆಬ್ಬಿಸುವುದಲ್ಲದೇ, ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಅಲ್ಲಿಯ ನಿವಾಸಿಗಳು ಪ್ರತಿಭಟನೆ ನಡೆಸಿದರು.
ಕನಕಗಿರಿ ಪಟ್ಟಣದ ವಾಲ್ಮೀಕಿ ಸರ್ಕಲ್‌ನಿಂದ ಪ್ರತಿಭಟನೆ ಮೆರವಣಿಗೆ ಮಾಡಿ, ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, “ನಮ್ಮನ್ನು ನಮ್ಮ ತಾಂಡಾಗಳಿಂದ ಜಾಗ ಖಾಲಿ ಮಾಡುವಂತೆ ಮಾನಸಿಕ ಹಿಂಸೆ ಮತ್ತು ದೌರ್ಜನ್ಯ ನೀಡುತ್ತಿದ್ದಾರೆ. ಇದನ್ನೆಲ್ಲ ತಡೆ ಹಿಡಿದು, ನಾವು ಸಾಗುವಳಿ ಮಾಡುತ್ತಿರುವ ಭೂಮಿಯನ್ನು ನಮಗೆ ಬಿಡಿಸಿಕೊಡಬೇಕ. ನಮ್ಮ ಪಾಡಿಗೆ ನಾವು ನೆಮ್ಮದಿಯಿಂದ ಸಾಗುವಳಿ ಮಾಡಲು ಬಿಡಬೇಕು” ಎಂದು ಆಗ್ರಹಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯ ಸೌಲಭ್ಯಗಳ ಪರಿಶೀಲನೆ
ಈ ವೇಳೆ ಹೋರಾಟಗಾರ ಪಾಮಣ್ಣ ಅರಳಿಗನೂರ ಮಾತನಾಡಿ, “ವಿನಾಕಾರಣ ಅಧಿಕಾರಿಗಳು ಭೂಮಿಯಿಂದ ಹೊರ ಹಾಕಲು ನೋಟಿಸ್ ನೀಡಿರುತ್ತಾರೆ. ನಾವುಗಳು 65-70 ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿರುತ್ತೇವೆ. ನಮ್ಮ ಹೆಸರಿನಲ್ಲಿ ಪಹಣಿ ಕಬ್ಜ ಇರುತ್ತದೆ. ನಮಗೆ ಈ ಭೂಮಿ ಬಿಟ್ಟರೆ ಬೇರೆ ಯಾವುದೇ ಜಮೀನು ಇರುವುದಿಲ್ಲ. ಆದಕಾರಣ ಅರಣ್ಯ ಇಲಾಖೆಯವರು ಯಾವುದೇ ಕಾರಣಕ್ಕೆ ನಮ್ಮ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಾರದು” ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಾಂಡುರಂಗ ರಾಥೋಡ್, ಸಂಗಪ್ಪ ರಾಮದುರ್ಗ, ಅಂಬರೀಷ್ ರಾಥೋಡ್ ಸೇರಿದಂತೆ ಹಲವರು ಇದ್ದರು.





