ಹೊಸಪೇಟೆ ದೇವರ ದಾಸಿಮಯ್ಯ ಹಾಗೂ ಜೇಡರ ದಾಸಿಮಯ್ಯ ಒಂದೇ ವ್ಯಕ್ತಿ ಎಂದು ಪ್ರತಿಪಾದಿಸಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರೊ. ವಾಸುದೇವ ಬಡಿಗೇರ ಅವರ ವಿರುದ್ಧ ಕಾನೂನುಬದ್ಧ ಮತ್ತು ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ, ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಶಶಿಕಾಂತ ಪಟ್ಟಣ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
“ಎಂ.ಚಿದಾನಂದ ಮೂರ್ತಿ, ಎಂ.ಎಂ.ಕಲಬುರ್ಗಿ ಸಹಿತ ಹತ್ತಾರು ಸಂಶೋಧಕರು ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇಬ್ಬರೂ ಬೇರೆ ಬೇರೆ, ಅವರ ಕಾಲವೂ ಬೇರೆ ಬೇರೆ ಎಂದು ನಿರೂಪಿಸಿದ್ದಾರೆ, ಸತ್ಯವನ್ನು ಮರೆಮಾಚಿ ಸುಳ್ಳಿಗೆ ಪಟ್ಟ ಕಟ್ಟುವ ವಿಷಯ ಸಂಶೋಧನೆ ಆಗಲಾರದು. ಕಕ್ಕಯ್ಯ, ಗುಂಡಯ್ಯ, ಕುಂಬಾರ ಮಾದಾರ ಚೆನ್ನಯ್ಯ ಬಸವಣ್ಣನವರ ಸಮಕಾಲೀನ ಅಲ್ಲ, ಅವರು ಬಸವಪೂರ್ವಯುಗದ ಶರಣರು ಎನ್ನುವ ಇನ್ನೊಂದು ಶುದ್ಧ ಸುಳ್ಳು ಹೇಳುತ್ತಾರೆ” ಎಂದರು.
ಸಂಶೋಧನೆಗೆ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಶಸ್ತಿ ಲಭಿಸಿದ್ದನ್ನು ವಾಸುದೇವ ಬಡಿಗೇರ್ ಸಮರ್ಥಿಸಿದ ವಿಚಾರವೂ ಆ ಸುದ್ದಿಯ ಜತೆಗೆ ಇತ್ತು. ಶಶಿಕಾಂತ ಪಟ್ಟಣ ಇದಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದು, ತಾವು ನಾಲೈದು ವರ್ಷಗಳಿಂದಲೂ ವಾಸುದೇವ ಬಡಿಗೇರ್ ಅವರ ಸಂಶೋಧನೆಗೆ ಆಕ್ಷೇಪ ಸಲ್ಲಿಸುತ್ತ ಬಂದಿರುವುದನ್ನು ಹಾಗೂ ಮೇ 20ಕ್ಕಿಂತ ಮೊದಲು ಹಲವು ಪತ್ರಗಳನ್ನು ವಿಶ್ವವಿದ್ಯಾಲಯಕ್ಕೆ ಬರೆದು ಪ್ರಾಧ್ಯಾಪಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿರುವುದನ್ನು ತಿಳಿಸಿದ್ದಾರೆ.





