ಪ್ರತಿಭೆ ಇದ್ದರೆ ಜಾಗತಿಕ ಮನ್ನಣೆ ದೊರೆಯುತ್ತದೆ ಎನ್ನುವುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವಿದ್ಯಾರ್ಥಿ ಆಕಾಶ್ ಹರಿಕಂತ್ರ ಉತ್ತಮ ಉದಾಹರಣೆಯಾಗಿದ್ದಾರೆ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಆಕಾಶ್ ಅವರನ್ನು ಜಪಾನ್ ಸರ್ಕಾರ ತನ್ನ ಪ್ರತಿಷ್ಠಿತ ಸಾಕುರಾ ಸೈನ್ಸ್ ಎಕ್ಸ್ಚೇಂಜ್ ಪ್ರೋಗ್ರಾಂ ಅಡಿಯಲ್ಲಿ ಆಹ್ವಾನಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಜಾಗತಿಕ ಅನುಭವ ಪಡೆಯುವ ಅವಕಾಶ ಕಲ್ಪಿಸಿದೆ.
ಪ್ರಸ್ತುತ ಕುಮಟಾ ನೆಲ್ಲಿಕೇರಿಯ ಸರ್ಕಾರಿ ಹನುಮಂತ ಬೆಣ್ಣೆ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಆಕಾಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲೇ ಪೂರ್ಣಗೊಳಿಸಿದ್ದಾರೆ. 8ನೇ ತರಗತಿಯಲ್ಲಿದ್ದಾಗ ಎನ್‌ಎಂಎಂಎಸ್ (NMMS) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಗಳಿಸಿ ಗಮನ ಸೆಳೆದಿದ್ದರು.
ಈ ಸುದ್ದಿ ಓದೀದ್ದಿರಾ? ಸಿದ್ದಾಪುರ | ಕಾನಸೂರು ವಸತಿ ಶಾಲೆ ವಿದ್ಯಾರ್ಥಿ ಸಾವು ಪ್ರಕರಣ: ಇಬ್ಬರು ಸಿಬ್ಬಂದಿ ಅಮಾನತು
ಆಕಾಶ್ ಅವರಿಗೆ ಜಪಾನ್‌ನ ಶೈಕ್ಷಣಿಕ ವಾತಾವರಣ, ಸಂಶೋಧನಾ ಕೇಂದ್ರಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಭೇಟಿ ನೀಡುವ ಅವಕಾಶ ದೊರಕಿತ್ತು. ಪ್ರವಾಸದ ವೇಳೆ ವಿದ್ಯಾರ್ಥಿಗಳು ಅತ್ಯಾಧುನಿಕ ವಿಜ್ಞಾನ ಪ್ರಯೋಗಾಲಯಗಳು, ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಹಾಗೂ ಪ್ರಮುಖ ಸಂಶೋಧನಾ ಸಂಸ್ಥೆಗಳಿಗೆ ಭೇಟಿ ನೀಡಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಅರಿತುಕೊಂಡರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹಾಗೂ ಕ್ವಾಂಟಮ್ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳ ಕುರಿತು ಮಾಹಿತಿ ಪಡೆಯುವ ಅವಕಾಶವೂ ಲಭಿಸಿತು.
ಮೇ 23ರಿಂದ 30ರವರೆಗೆ ನಡೆದ ಈ ಶೈಕ್ಷಣಿಕ ಪ್ರವಾಸಕ್ಕೆ ಕರ್ನಾಟಕದಿಂದ ಕೇವಲ ನಾಲ್ವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ವಿಶೇಷ ವೀಸಾ ವ್ಯವಸ್ಥೆ ಸೇರಿದಂತೆ ಪ್ರವಾಸದ ಸಂಪೂರ್ಣ ವೆಚ್ಚವನ್ನು ಜಪಾನ್ ಸರ್ಕಾರವೇ ಭರಿಸಿತ್ತು. ಸಾಕುರಾ ಸೈನ್ಸ್ ಎಕ್ಸ್ಚೇಂಜ್ ಪ್ರೋಗ್ರಾಂ ಜಪಾನ್‌ನ ಅಂತರರಾಷ್ಟ್ರೀಯ ಯುವ ವಿಜ್ಞಾನ ವಿನಿಮಯ ಕಾರ್ಯಕ್ರಮವಾಗಿದ್ದು, ವಿವಿಧ ದೇಶಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜಪಾನ್‌ನ ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ. ಜೊತೆಗೆ ವಿವಿಧ ದೇಶಗಳ ವಿದ್ಯಾರ್ಥಿಗಳ ನಡುವೆ ಪರಸ್ಪರ ಅರಿವು ಮತ್ತು ಸ್ನೇಹವನ್ನು ಬೆಳೆಸಲು ಕೂಡ ಸಹಕಾರಿಯಾಗಿದೆ.
ಈ ಕುರಿತು ಮಾತನಾಡಿದ ಆಕಾಶ್ ಹರಿಕಂತ್ರ, “ಜಪಾನ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ಮಾತ್ರವಲ್ಲದೆ ಅಲ್ಲಿನ ಶಿಸ್ತು, ಸಮಯಪ್ರಜ್ಞೆ, ಸ್ವಚ್ಛತೆ ಹಾಗೂ ಸಂಸ್ಕೃತಿ ನನ್ನ ಮೇಲೆ ಆಳವಾದ ಪ್ರಭಾವ ಬೀರಿದೆ. ಈ ಅನುಭವ ನನ್ನ ಮುಂದಿನ ವಿದ್ಯಾಭ್ಯಾಸ ಹಾಗೂ ಭವಿಷ್ಯದ ಗುರಿಗಳಿಗೆ ಹೊಸ ಪ್ರೇರಣೆ ನೀಡಿದೆ” ಎಂದು ಹೇಳಿದರು.
ಗ್ರಾಮೀಣ ಹಿನ್ನೆಲೆಯಿಂದ ಬಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಯೊಬ್ಬರು ಜಪಾನ್ ಸರ್ಕಾರದ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವುದು ಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಾಧನೆಯಾಗಿದೆ.




