ಕುಮಟಾ: ಸಮಯೋಚಿತ ಧೈರ್ಯ, ಮಾನವೀಯತೆ ಹಾಗೂ ಕ್ಷಿಪ್ರ ಕಾರ್ಯಾಚರಣೆಯಿಂದ ಇಬ್ಬರು ಯುವಕರು ಸಮುದ್ರದ ಅಲೆಗಳಲ್ಲಿ ಸಿಲುಕಿ ಪ್ರಾಣಾಪಾಯದಲ್ಲಿದ್ದ ಹಾವೇರಿ ಮೂಲದ ಯುವಕನನ್ನು ರಕ್ಷಿಸಿ ಸುರಕ್ಷಿತವಾಗಿ ದಡ ಸೇರಿಸಿದ ಘಟನೆ ಕುಮಟಾದ ಹೆಡ್ ಬಂಡರ್ ಕಡಲತೀರದಲ್ಲಿ ನಡೆದಿದೆ.
ಹಾವೇರಿ ಮೂಲದ ಮೊಹಮ್ಮದ್ ಜಿಲಾನಿ ಅವರು ಸಮುದ್ರದಲ್ಲಿ ಈಜಲು ತೆರಳಿದ್ದ ವೇಳೆ ಅಲೆಗಳ ಪ್ರಬಲ ಸೆಳೆತಕ್ಕೆ ಸಿಲುಕಿದ್ದರು. ಅಲೆಗಳ ಅಬ್ಬರ ಹೆಚ್ಚುತ್ತಿದ್ದಂತೆ ಅವರು ಮುಳುಗುವ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳದಲ್ಲಿದ್ದವರಲ್ಲಿ ಆತಂಕ ಮನೆ ಮಾಡಿತ್ತು.
ಈ ವೇಳೆ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ಜೀವರಕ್ಷಣಾ ಪಡೆಯ ಸದಸ್ಯ ಉದಯ್ ಹರಿಕಂತ್ರ ಹಾಗೂ ಅವರ ಸ್ನೇಹಿತ ಮೂರ್ತಿ ಹರಿಕಂತ್ರ ಯಾವುದೇ ಹಿಂಜರಿಕೆಯಿಲ್ಲದೆ ಸಮುದ್ರಕ್ಕೆ ಧುಮುಕಿದರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಪ್ರಬಲ ಅಲೆಗಳನ್ನು ಎದುರಿಸಿದ ಇಬ್ಬರೂ ಮೊಹಮ್ಮದ್ ಗಿಲಾನಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದು ಪ್ರಾಣಾಪಾಯದಿಂದ ಪಾರು ಮಾಡಿದರು.
ಈ ಸುದ್ದಿ ಓದಿದ್ದೀರಾ? ಶಿರಸಿಯ ಮಾಜಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ
ಇಬ್ಬರ ಸಮಯೋಚಿತ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದುರಂತ ತಪ್ಪಿದ್ದು, ಮೊಹಮ್ಮದ್ ಗಿಲಾನಿ ಅವರಿಗೆ ಮರುಜೀವ ದೊರೆತಂತಾಯಿತು. ರಕ್ಷಣಾ ಕಾರ್ಯವನ್ನು ಕಂಡ ಸ್ಥಳೀಯರು ಉದಯ್ ಹರಿಕಂತ್ರ ಮತ್ತು ಮೂರ್ತಿ ಹರಿಕಂತ್ರ ಅವರ ಸಾಹಸ, ಸಮಯಪ್ರಜ್ಞೆ ಹಾಗೂ ಮಾನವೀಯ ಸೇವಾ ಮನೋಭಾವವನ್ನು ಶ್ಲಾಘಿಸಿದರು.
ಎಚ್ಚರಿಕೆ: ಮಳೆಗಾಲದಲ್ಲಿ ಸಮುದ್ರದ ಅಲೆಗಳು ಅಪಾಯಕಾರಿಯಾಗಿರುತ್ತವೆ. ಪ್ರವಾಸಿಗರು ಜೀವರಕ್ಷಕರ ಸೂಚನೆಗಳನ್ನು ಪಾಲಿಸಿ, ಅಪಾಯದ ಪ್ರದೇಶಗಳಿಗೆ ಇಳಿಯದಂತೆ ಹಾಗೂ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ವಿನಂತಿ.




