ಮುಸ್ಲಿಂ ಮಹಿಳೆಯರು ಮತ್ತು ಸಮುದಾಯದ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ್ದ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಶ್ರೀರಂಗಪಟ್ಟಣ 3ನೇ ಅಪರ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಜಾಮೀನು ನೀಡಿದೆ.
ಜನವರಿ 10ರಂದು ವಿಚಾರಣ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಜ.17ಕ್ಕೆ ಕಾಯ್ದಿರಿಸಿತ್ತು. ಇದೀಗ, ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ದೂರು ದಾಖಲಿಸಿದ್ದ ಅರ್ಜಿದಾರೆ ನಜ್ಮಾ ಚಿಕ್ಕನೇರಳೆ ಅವರ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಬಾಲನ್, “ಸುಪ್ರಿಂ ಕೋರ್ಟ್ ಮತ್ತು ಹಲವು ಹೈಕೋರ್ಟ್‌ಗಳ ತೀರ್ಪುಗಳ ಪ್ರಕಾರ ಆರೋಪಿ ಕಲ್ಲಡ್ಕ ಪ್ರಭಾಕರ್ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾನೆ. ದೇಶದ ಭದ್ರತೆ, ಸೌಹಾರ್ದತೆಗೆ ಈ ಆರೋಪಿ ಕಂಟಕವಾಗಿದ್ದಾನೆ. ಈ ಹಿಂದಿನ ಐಪಿಸಿ ಮಾತ್ರವಲ್ಲ, ಈಗಿನ ನ್ಯಾಯ ಸಂಹಿತಾ ಮತ್ತು ಸಾಕ್ಷ್ಯ ಅಧಿನಿಯಮದ ಪ್ರಕಾರವೂ ಆರೋಪಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನಿಗೆ ಅನರ್ಹನಾಗಿದ್ದಾನೆ” ಎಂದು ವಾದಿಸಿದ್ದರು.
ವಾದ, ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಕಲ್ಲಡ್ಕ ಪ್ರಭಾಕರ ಭಟ್‌ಗೆ ಜಾಮೀನು ಮಂಜೂರು ಮಾಡಿ ಬುಧವಾರ ಆದೇಶಿಸಿದೆ.
ಶ್ರೀರಂಗಪಟ್ಟಣದಲ್ಲಿ ನಡೆದ ಹನುಮ ಶೋಭಾಯಾತ್ರೆಯಲ್ಲಿ ಮಾತನಾಡಿದ್ದ ಪ್ರಭಾಕರ್ ಭಟ್, ಮುಸ್ಲಿಂ ಮಹಿಳೆಯರು ಮತ್ತು ಸಮುದಾಯದ ವಿರುದ್ಧ ಅವಹೇಳನಾಕಾರಿ ಮತ್ತು ಪ್ರಚೋದನಾಕಾರಿ ದ್ವೇಷ ಭಾಷಣೆ ಮಾಡಿದ್ದರು. ಅವರ ವಿರುದ್ಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಮಹಿಳಾ ಹೋರಾಟಗಾರ್ತಿ ನಜ್ಮಾ ನಝೀರ್ ಚಿಕ್ಕನೇರಳೆ ದೂರು ದಾಖಲಿಸಿದ್ದರು. ಅವರ ದೂರಿನ ಆಧಾರದ ಮೇಲೆ ಭಟ್ ವಿರುದ್ಧ ಐಪಿಸಿ ಸೆಕ್ಷನ್ 294, 295, 298, 354, 506, 509 ಮತ್ತು 153 ಎ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದರು.