ಸೇವೆ ಖಾಯಮಾತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಕೆಳೆದ ಎರಡು ವಾರಗಳಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ನಾನಾ ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಮುಷ್ಕರ ನಿರತರಾಗಿರುವ ಮಂಡ್ಯದ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಮಂಗಳವಾರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹೊತ್ತು ವಿನೂತನ ಪ್ರತಿಭಟನೆ ನಡೆಸಿದ್ದಾರೆ.
ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಎದುರು 15ನೇ ದಿನಗಳಿಂದ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿದ್ದು, ಮಂಗಳವಾರ ಸಿಮೆಂಟ್ ಇಟ್ಟಿಗೆ ಹೊತ್ತು ಪ್ರತಿಭಟಿಸಿದ್ದಾರೆ. ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೇವೆ ಖಾಯಂ ಮಾಡದೆ ಸರ್ಕಾರ ವಿಳಂಬ ಮಾಡುತ್ತಿದ್ದು, ವಿನಾಕಾರಣ ಕಾಲಹರಣ ಮಾಡುತ್ತಿದೆ. ಅಧಿಕಾರಕ್ಕೆ ಬರುವ ಮುನ್ನ ಭರವಸೆ ನೀಡಿದ ಸರಕಾರ ಇದೀಗ ಮೀನಾ ಮೇಷ ಎಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತರಗತಿ ಬಹಿಷ್ಕರಿಸಿರುವುದರಿಂದ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ಅಡ್ಡಿಯಾಗುತ್ತಿದೆ, ರಾಜ್ಯ ಸರ್ಕಾರ ಆದಷ್ಟು ಶೀಘ್ರ ತೀರ್ಮಾನ ಕೈಗೊಂಡರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ತುರ್ತು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಎರಡು ದಶಕಕ್ಕೂ ಹೆಚ್ಚು ಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಮಾಡಿದ್ದೇವೆ, ಆದರೆ ಇದುವರೆಗೂ ಸೇವಾ ಭದ್ರತೆ ಇಲ್ಲದೆ ಜೀವನದಲ್ಲಿ ಅಭದ್ರತೆ ಕಾಡುತ್ತಿದೆ, ಜೀವನ ನಿರ್ವಹಣೆಯು ಕಷ್ಟಕರವಾಗಿದೆ,ಸರ್ಕಾರಿ ಸೌಲಭ್ಯ ಇಲ್ಲದೆ ಬದುಕು ಅತಂತ್ರವಾಗಿದ್ದು ಸರ್ಕಾರ ಅತಿಥಿ ಉಪನ್ಯಾಸಕರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಗೌರವಾಧ್ಯಕ್ಷ ಜಿ ವಿ ರಮೇಶ್, ಅಧ್ಯಕ್ಷ ಕೆ.ಪರಮೇಶ್, ಉಪಾಧ್ಯಕ್ಷ ಡಾ.ಎಂ.ಎಸ್.ಚಲುವರಾಜು, ಡಾ.ಗಣೇಶ್,ನಂದಿನಿ ಬಿ ಆರ್, ಉಮಾ ಕಾಂತ್,ನಾಗರತ್ನ ಜೆ.ಎಂ, ಭಾರ್ಗವಿ ನೇತೃತ್ವ ವಹಿಸಿದ್ದರು.