ಮುಂಡಗೋಡ: ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ರೌಡಿಶೀಟರ್‌ಗಳ ವಿರುದ್ಧ ಉತ್ತರ ಕನ್ನಡ ಜಿಲ್ಲಾಡಳಿತವು ಕರ್ನಾಟಕ ಗುಂಡಾ ಕಾಯ್ದೆಯಡಿ ಕ್ರಮ ಕೈಗೊಂಡಿದ್ದು, ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಜಾವತಿ ನಿವಾಸಿ ಶಬ್ಬೀರ್ ತಂದೆ ಸತ್ತಾರಸಾಬ್ ಮಸ್ತಮದಾನಿ (34) ವಿರುದ್ಧ 2016ರಿಂದ 2025ರವರೆಗೆ ಕೊಲೆ, ಕೊಲೆ ಯತ್ನ, ಹಲ್ಲೆ, ಜೀವ ಬೆದರಿಕೆ, ಅಕ್ರಮ ಪ್ರವೇಶ, ಸುಲಿಗೆ ಸೇರಿದಂತೆ ಒಟ್ಟು 8 ಪ್ರಕರಣಗಳು ದಾಖಲಾಗಿದ್ದವು. ಈತನ ವಿರುದ್ಧ ಈಗಾಗಲೇ ರೌಡಿಶೀಟ್ ತೆರೆಯಲಾಗಿದ್ದರೂ ಅಪರಾಧ ಚಟುವಟಿಕೆಗಳು ಮುಂದುವರಿದ ಹಿನ್ನೆಲೆಯಲ್ಲಿ ಗುಂಡಾ ಕಾಯ್ದೆಯಡಿ ಬಂಧಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಮುಂಡಗೋಡ | ಜೇನುನೊಣ ದಾಳಿಗಿಂತ ಭಯಾನಕ ಅವ್ಯವಸ್ಥೆ: ಮೊರಾರ್ಜಿ ವಸತಿ ಶಾಲೆ ವಿರುದ್ಧ ಗಂಭೀರ ಆರೋಪ
ಅದೇ ರೀತಿ, ಗಾಂಧಿನಗರದ ನಿವಾಸಿ ಸಂಜು ತಂದೆ ಅರ್ಜುನ್ ನವಲೆ (24) ವಿರುದ್ಧ ದರೋಡೆ, ಕೊಲೆ, ಕೊಲೆ ಯತ್ನ ಸೇರಿದಂತೆ ಗಂಭೀರ ಸ್ವರೂಪದ 5 ಪ್ರಕರಣಗಳು ದಾಖಲಾಗಿದ್ದವು. ಈತನ ವಿರುದ್ಧವೂ ರೌಡಿಶೀಟ್ ತೆರೆಯಲಾಗಿದ್ದರೂ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಗುಂಡಾ ಕಾಯ್ದೆಯಡಿ ಕ್ರಮಕ್ಕೆ ಮುಂದಾಗಲಾಗಿತ್ತು.
ಮುಂಡಗೋಡ ಪೊಲೀಸ್ ಠಾಣೆ ವತಿಯಿಂದ ಸಲ್ಲಿಸಲಾದ ಪ್ರಸ್ತಾವನೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದ್ದು, ಕರ್ನಾಟಕ ಅಪಾಯಕಾರಿ ಚಟುವಟಿಕೆಗಳ ತಡೆ ಕಾಯ್ದೆ-1985ರ ಕಲಂ 3(2) ಅಡಿಯಲ್ಲಿ ಇಬ್ಬರ ವಿರುದ್ಧ ಬಂಧನ ಆದೇಶ ಹೊರಡಿಸಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಜೂನ್ 9ರಂದು ಶಬ್ಬೀರ್ ಮಸ್ತಮದಾನಿ ಹಾಗೂ ಸಂಜು ನವಲೆ ಅವರನ್ನು ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಮುಂಡಗೋಡ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





