ಮುಂಡಗೋಡ ತಾಲೂಕು ಭೂ ಹಕ್ಕುದಾರರ ಹಿತರಕ್ಷಣಾ ವೇದಿಕೆ (ರಿ) ಹಾಗೂ ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟವು ತಾಲೂಕಿನ ವಿವಿಧ ಜನಪರ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದ್ದರು.
ತಾಲೂಕಿನಲ್ಲಿ ಅರಣ್ಯ ಹಕ್ಕು ಕಾಯ್ದೆ 2006ರ ಅಡಿ ಸಲ್ಲಿಕೆಯಾದ ಒಟ್ಟು 7,009 ಅರ್ಜಿಗಳಲ್ಲಿ ಕೇವಲ 247 ಕ್ಲೀಮುದಾರರ ಹಕ್ಕನ್ನು ಮಾತ್ರ ಮಾನ್ಯ ಮಾಡಲಾಗಿದೆ. ಆದರೆ 3,781 ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 2,981 ಅರ್ಜಿಗಳು ಇಂದಿಗೂ ಪರಿಶೀಲನೆಗೆ ಬಾಕಿ ಉಳಿದಿವೆ.
ಕಂದಾಯ ಮತ್ತು ಅರಣ್ಯ ಇಲಾಖೆಗಳು ನಡೆಸುತ್ತಿರುವ ಜಂಟಿ ಮಹಜರು ಪ್ರಕ್ರಿಯೆಯಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದು, ಅರ್ಜಿದಾರರ ಸ್ವಾಧೀನತೆಯ ಜಮೀನನ್ನು ಪರಿಗಣಿಸದೆ ಇಲಾಖೆ ಹೇಳಿದ ಕ್ಷೇತ್ರವನ್ನು ನಮೂನೆಯಲ್ಲಿ ತುಂಬಲಾಗುತ್ತಿದೆ ಹಾಗೂ ನಕಲು ಪ್ರತಿಯನ್ನು ನೀಡುತ್ತಿಲ್ಲ ಎಂದು ಒಕ್ಕೂಟ ಆರೋಪಿಸಿದೆ
ಈ ಸುದ್ದಿ ಓದಿದ್ದೀರಾ? ಹಳಿಯಾಳ | ಗ್ರಾಮಗಳಿಗೆ ತೆರಳಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ: ಅಧಿಕಾರಿಗಳಿಗೆ ಶಾಸಕ ಆರ್.ವಿ. ದೇಶಪಾಂಡೆ ಸೂಚನೆ
ಕಳೆದ 6 ವರ್ಷಗಳಿಂದ ತಾಲೂಕಾ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ನಡೆಯದೆ ಇರುವುದರಿಂದ ವಿಕೇಂದ್ರೀಕರಣ ವ್ಯವಸ್ಥೆಗೆ ಹಿನ್ನಡೆಯಾಗಿದೆ. ಮತ್ತೊಂದೆಡೆ, ಮಳೆಯ ಅಭಾವದಿಂದ ತಾಲೂಕಿನಲ್ಲಿ ಶೇ. 70ರಷ್ಟು ಹೊಲಗಳಲ್ಲಿ ಬಿತ್ತನೆಯೇ ನಡೆದಿಲ್ಲ. ಬೆಳೆಗಳು ಒಣಗುತ್ತಿದ್ದು, ಸಾಲಬಾಧೆ ತಾಳಲಾರದೆ ರೈತರು ಕಂಗಾಲಾಗಿದ್ದಾರೆ. ಕೂಡಲೇ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ವಿಶೇಷ ಪರಿಹಾರ ಹಾಗೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ.
ಪ್ರಧಾನ ಮಂತ್ರಿ ಆವಾಸ ಮತ್ತು ಆಶ್ರಯ ಯೋಜನೆಯಡಿ ಮಂಜೂರಾದ ಮನೆಗಳಿಗೆ ಕಳೆದ ಮೂರು ವರ್ಷಗಳಿಂದ ಶೇ. 80ರಷ್ಟು ಅನುದಾನ ಬಿಡುಗಡೆಯಾಗದೆ ಫಲಾನುಬವಿಗಳು ಅರೆಬರೆ ಮನೆಗಳಲ್ಲಿ ಪರದಾಡುವಂತಾಗಿದೆ. ಇದರೊಂದಿಗೆ, ಕುಂಟುತ್ತಾ ಸಾಗುತ್ತಿರುವ ಯರೈಬಲ್ ಹಾಗೂ ಸುಳ್ಳಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ಕೆರೆ ತುಂಬಿಸುವ ಮೂಲಕ ಕೃಷಿಗೆ ನೀರು ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




