ಮುಂಡಗೋಡ: ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ಮನೆಯಲ್ಲಿ ಒಂಟಿಯಾಗಿದ್ದ 75 ವರ್ಷದ ವೃದ್ಧೆಯ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮನೆಯಲ್ಲಿದ್ದ ₹1.70 ಲಕ್ಷ ನಗದು ಹಾಗೂ ಸುಮಾರು 35 ಗ್ರಾಂ ಚಿನ್ನಾಭರಣ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಆರಂಭದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇದೀಗ ಮೃತೆಯ ಮಗ ನೀಡಿದ ದೂರಿನ ಆಧಾರದ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಲಳ್ಳಿ ಗ್ರಾಮದ ಕಮಲವ್ವ ಕೋಂ ತಿರಕಪ್ಪ ಆಡೂರ (75) ಮೃತಪಟ್ಟ ವೃದ್ಧೆ. ಅಕ್ಟೋಬರ್ 25ರ ರಾತ್ರಿ 8.34ರಿಂದ ಅಕ್ಟೋಬರ್ 26ರ ಬೆಳಿಗ್ಗೆ 6.30ರ ನಡುವಿನ ಅವಧಿಯಲ್ಲಿ ಅವರು ಮನೆಯಲ್ಲಿ ಮೃತಪಟ್ಟಿದ್ದರು. ಘಟನೆ ಬೆಳಕಿಗೆ ಬಂದ ಬಳಿಕ ಮೃತೆಯ ಪುತ್ರ ರಾಘವೇಂದ್ರ ತಿರಕಪ್ಪ ಆಡೂರ ನೀಡಿದ ದೂರಿನಂತೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನ; ಪಿಎಸ್‌ಐ ಕಡೆಗೆ ರಾಡ್ ಎಸೆದ, ಟ್ಯಾಂಕರ್ ಚಾಲಕನ ಬಂಧನ
ಮನೆಯಲ್ಲಿದ್ದ ₹1.70 ಲಕ್ಷ ನಗದು ಹಾಗೂ ಸುಮಾರು 35 ಗ್ರಾಂ ಚಿನ್ನಾಭರಣಗಳು ಕಾಣೆಯಾಗಿರುವುದು ಆರಂಭದಿಂದಲೇ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ರಮೇಶ ಹಾನಾಪುರ ಹಾಗೂ ಪಿಎಸ್‌ಐ ಮಂಜುನಾಥ ಗೌಡರ ನೇತೃತ್ವದ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದ್ದರು.
ಬಳಿಕ ಕಾರವಾರದಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಾಗಿತ್ತು. ಶ್ವಾನದಳವು ಮನೆಯ ಸುತ್ತಮುತ್ತ ಹಾಗೂ ಹಿಂಭಾಗದ ಓಣಿಯಲ್ಲಿ ಶೋಧ ನಡೆಸಿತ್ತು. ಇದೀಗ ಪೊಲೀಸ್ ಠಾಣೆಗೆ ಹಾಜರಾದ ಮೃತೆಯ ಮಗ ರಾಘವೇಂದ್ರ ಹೊಸದಾಗಿ ಲಿಖಿತ ದೂರು ನೀಡಿದ್ದಾರೆ.
ಗ್ರಾಮದ ಮಾರುತಿ ಅಡಿವೆಪ್ಪ ಮುಡಸಾಲಿ ಎಂಬಾತ ತಮ್ಮ ಮನೆಗೆ ಆಗಾಗ ಬರುತ್ತಿದ್ದ. ಸುಮಾರು ಎರಡು ತಿಂಗಳ ಹಿಂದೆ ಮನೆಯಲ್ಲಿ ನಡೆದ ಮಗಳ ಋತುಮತಿ ಕಾರ್ಯಕ್ರಮಕ್ಕೂ ಆಹ್ವಾನವಿಲ್ಲದೆ ಬಂದು ಕುಟುಂಬದವರೊಂದಿಗೆ ಆತ್ಮೀಯವಾಗಿ ಮಾತನಾಡಿದ್ದ. ತಾಯಿ ಮೃತಪಟ್ಟ ಹಿಂದಿನ ದಿನವೂ ಮನೆಗೆ ಬಂದು ಒಂಟಿಯಾಗಿದ್ದ ಅವರೊಂದಿಗೆ ಮಾತನಾಡಿಕೊಂಡು ಹೋಗಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾಯಿ ಮೃತಪಟ್ಟ ವಿಷಯ ತಿಳಿದಿದ್ದರೂ ಆತ ಅಂತ್ಯಕ್ರಿಯೆ ಅಥವಾ ನಂತರದ ತಿಥಿ ಕಾರ್ಯಕ್ಕೆ ಮನೆಗೆ ಬಂದಿರಲಿಲ್ಲ. ಅಂದಿನಿಂದ ಗ್ರಾಮದಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ತಾಯಿಯ ಬಳಿಯಿದ್ದ ಹಣ ಮತ್ತು ಚಿನ್ನಾಭರಣಗಳ ಬಗ್ಗೆ ತಿಳಿದಿದ್ದ ಆತನೇ, ತಾಯಿ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಕೊಲೆ ಮಾಡಿ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರಬಹುದು ಎಂಬ ಬಲವಾದ ಅನುಮಾನವಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾರುತಿ ಅಡಿವೆಪ್ಪ ಮುಡಸಾಲಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಆತನನ್ನು ಪತ್ತೆಹಚ್ಚಿ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವೃದ್ಧೆಯ ಸಾವಿನ ನಿಖರ ಕಾರಣ, ನಾಪತ್ತೆಯಾಗಿರುವ ನಗದು ಮತ್ತು ಚಿನ್ನಾಭರಣಗಳ ಪತ್ತೆ ಹಾಗೂ ದೂರಿನಲ್ಲಿ ಉಲ್ಲೇಖಿಸಿರುವ ವ್ಯಕ್ತಿಯ ಪಾತ್ರದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




