ಮುಂಡಗೋಡ: ಹಳೇ ಪಿಂಚಣಿ ಯೋಜನೆ (OPS) ಜಾರಿಗೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ (ರಿ), ತಾಲೂಕು ಘಟಕ ಪ್ರತಿಭಟನೆ ನಡೆಸಿ, ಬಳಿಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಮುಖಂಡರು, 2006ರ ಏಪ್ರಿಲ್ 1ರಿಂದ ನೇಮಕಗೊಂಡ ಅನುದಾನಿತ ಶಾಲಾ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಬದಲಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಜಾರಿಗೊಳಿಸಿರುವುದರಿಂದ ನಿವೃತ್ತಿ ಜೀವನದಲ್ಲಿ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳುತ್ತಿರುವಾಗ, ಅನುದಾನಿತ ಶಾಲಾ ನೌಕರರನ್ನು ಕಡೆಗಣಿಸಿರುವುದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಮಳೆಯ ಅಬ್ಬರ: ದೇವಿಮನೆ ಘಟ್ಟದಲ್ಲಿ ಭೂಕುಸಿತ, ಹಾರವಾಡದಲ್ಲಿ ಕಡಲ ಕೊರೆತ ತೀವ್ರ
ರಾಜ್ಯದ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಶಿಕ್ಷಕರು ಮತ್ತು ಸಿಬ್ಬಂದಿ ಸರ್ಕಾರದ ಶಿಕ್ಷಣ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುತ್ತಿದ್ದರೂ, ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಆದ್ದರಿಂದ ಈ ತಾರತಮ್ಯವನ್ನು ಮಾಡಿದೆ ನ್ಯಾಯಸಮ್ಮತವಾಗಿ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಪ್ರಮುಖ ಬೇಡಿಕೆಗಳು:
2006ರ ಏಪ್ರಿಲ್ 1ರಿಂದ ನೇಮಕಗೊಂಡ ಅನುದಾನಿತ ಶಾಲಾ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (OPS) ಜಾರಿಗೊಳಿಸಬೇಕು.
ಕಾಲ್ಪನಿಕ ವೇತನ ಬಡ್ತಿ ಬಸವರಾಜ ಹೊರಟ್ಟಿ ಅವರ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು.
ಅನುದಾನಿತ ಶಾಲಾ ನೌಕರರಿಗೆ “ಆರೋಗ್ಯ ಸಿರಿ” (ಜ್ಯೋತಿ ಸಂಜೀವಿನಿ) ಯೋಜನೆಯನ್ನು ಸರ್ಕಾರಿ ನೌಕರರ ಮಾದರಿಯಲ್ಲಿ ವಿಸ್ತರಿಸಬೇಕು.
ಮಲೆನಾಡು ಜಿಲ್ಲೆಗಳ ಅನುದಾನಿತ ಶಾಲೆಗಳಿಗೆ ಮಂಜೂರಾಗಿರುವ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು.
ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಸರಕಾರಿ ಹಾಗೂ ಅನುದಾನಿತ ಶಾಲೆಗಳ ಸಿಬ್ಬಂದಿ ಹುದ್ದೆಗಳನ್ನು ಸಮಾನವಾಗಿ ಪರಿಗಣಿಸಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ಮುಂದಾಳತ್ವವನ್ನು ಸಂಘದ ತಾಲೂಕಾಧ್ಯಕ್ಷ ಹಾಗೂ ಡಿಎಸ್ಎಸ್ ರಾಜ್ಯ ಸಂಚಾಲಕ ಎಸ್ ಫಕ್ಕಿರಪ್ಪ ಅವರು ವಹಿಸಿದ್ದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸುಭಾಷ್ ಡೋರಿ, ನಿರ್ದೇಶಕ ಪ್ರಕಾಶ್ ಬಾಳಮ್ಮನವರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಕೆ. ಕುರುವಿನಕೊಪ್ಪ, ಪದವೀಧರ ಮುಖ್ಯೋಪಾಧ್ಯಾಯ ಹಾಗೂ ಪದವೀಧರ ಪ್ರಾಥಮಿಕ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಪುರ್ಲಿ, ತಾಲೂಕು ಅಧ್ಯಕ್ಷ ಎಸ್.ಸಿ. ಬಸನಗೌಡ್ರು, ಎಸ್.ಎಫ್. ಲಮಾಣಿ, ರೋಟರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎನ್. ಕುಲಕರ್ಣಿ, ಲೊಯೊಲಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವಿ.ವಿ. ಮಲ್ಲನಗೌಡ,
ಡಿ.ಎಸ್.ಎಸ್. ನಗರ ಸಂಚಾಲಕ ಹುಲಗಪ್ಪ ಭೋವಿವಡ್ಡರ, ಜೂಜೆ ಸಿದ್ದಿ, ಮುಂಡಗೋಡ ತಾಲೂಕಿನ ವಿವಿಧ ಪ್ರೌಢಶಾಲೆಗಳ ಸಹಶಿಕ್ಷಕರು, ನೌಕರರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬೆಂಬಲ ಸೂಚಿಸಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಇಕ್ಬಾಲ್ ಅಹಮದ್ (ಮುಖ್ಯ ಶಿಕ್ಷಕರು, ದಸ್ತಗಿರಿಯಾ ಉರ್ದು ಪ್ರೌಢಶಾಲೆ), ಪ್ರಭಾಕರ ಓಣಿಕೆರಿ, ಎಸ್.ಎ. ದೊಡ್ಡಮನಿ, ನ್ಯಾಸರ್ಗಿ ಸೇರಿದಂತೆ ತಾಲೂಕಿನ ವಿವಿಧ ಪ್ರೌಢಶಾಲೆಗಳ ಸಹಶಿಕ್ಷಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಎಸ್. ಡಿ. ಮೂಡೆಣ್ಣವರ, ತಾಲೂಕು ಅಧ್ಯಕ್ಷರು, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಎಲ್ಲರನ್ನು ಸ್ವಾಗತಿಸಿದರು. ಶ್ರೀ ಕೃಷ್ಣ ಗುಜಮಾಗಡಿ ವಂದಿಸಿದರು.




