ಮುಂಡಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಶೀಟರ್‌ಗಳಾದ ಬಸಾಪುರ ನಿವಾಸಿ ಮಧುಸಿಂಗ್ ತಂದೆ ಗಂಗಾರಾಮಸಿಂಗ್ ರಜಪೂತ್ ಹಾಗೂ ಮುಂಡಗೋಡದ ಗಾಂಧಿನಗರ ನಿವಾಸಿ ಮಂಜು ತಂದೆ ಅರ್ಜುನ ನವಲೆ ವಿರುದ್ಧ ದಾಖಲಾಗಿರುವ ಪ್ರಕರಣಗಳು, ಅವರ ಅಪರಾಧ ಹಿನ್ನೆಲೆ ಹಾಗೂ ಸಾರ್ವಜನಿಕ ಶಾಂತಿ-ಸುವ್ಯವಸ್ಥೆಗೆ ಉಂಟಾಗಬಹುದಾದ ಅಪಾಯವನ್ನು ಪರಿಗಣಿಸಿ, ಇಬ್ಬರನ್ನೂ ಉತ್ತರ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಅವಧಿಗೆ ಗಡಿಪಾರು ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆಯ ಕಲಂ 55(ಎ) ಮತ್ತು 55(ಬಿ) ಅಡಿಯಲ್ಲಿ ಜೂನ್ 27ರಂದು ಈ ಆದೇಶ ಹೊರಡಿಸಲಾಗಿದೆ. ಮಧುಸಿಂಗ್ ವಿರುದ್ಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ 2019ರ ದರೋಡೆ ಪ್ರಕರಣ ಸೇರಿದಂತೆ, 2025ರಲ್ಲಿ ದಾಖಲಾದ ಮತ್ತೊಂದು ಗಂಭೀರ ಪ್ರಕರಣವೂ ಸೇರಿ ವಿವಿಧ ಕಲಂಗಳಡಿ ಹಲವು ಅಪರಾಧ ಪ್ರಕರಣಗಳಿವೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಚುರುಕುಗೊಂಡ ಮಳೆ; ರೈತರ ಮೊಗದಲ್ಲಿ ಮಂದಹಾಸ, ಜಲಾಶಯಗಳ ನೀರಿನ ಮಟ್ಟ ಏರಿಕೆ
ಅದೇ ರೀತಿ ಮಂಜು ವಿರುದ್ಧ 2019ರ ದರೋಡೆ ಪ್ರಕರಣ, 2024ರಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಅಡಿಯಲ್ಲಿ ದಾಖಲಾಗಿರುವ ಪ್ರಕರಣ, ಕರ್ನಾಟಕ ಅತಿಯಾದ ಬಡ್ಡಿ ವಸೂಲಿ ನಿಷೇಧ ಕಾಯ್ದೆ–2004ರಡಿ ದಾಖಲಾಗಿರುವ ಪ್ರಕರಣ ಹಾಗೂ 2025ರಲ್ಲಿ ವಿವಿಧ ಕಲಂಗಳಡಿ ದಾಖಲಾಗಿರುವ ಮತ್ತೊಂದು ಗಂಭೀರ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.
ಇಬ್ಬರೂ ತಮ್ಮ ಅಪರಾಧ ಚಟುವಟಿಕೆಗಳನ್ನು ಮುಂದುವರಿಸುವ ಮೂಲಕ ಸಾರ್ವಜನಿಕ ಶಾಂತಿ, ನೆಮ್ಮದಿ, ಸೌಹಾರ್ದತೆ, ಜೀವ ಹಾಗೂ ಆಸ್ತಿ ರಕ್ಷಣೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇದೆ ಎಂದು ಮುಂಡಗೋಡ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ವರದಿ ಸಲ್ಲಿಸಿದ್ದರು.
ಇದರ ಆಧಾರದ ಮೇಲೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಮೂಲಕ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಗಡಿಪಾರು ಕ್ರಮ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು, ಆರೋಪಿಗಳ ಅಪರಾಧ ಹಿನ್ನೆಲೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳು ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಸಮಗ್ರವಾಗಿ ಪರಿಶೀಲಿಸಿ, ಮಧುಸಿಂಗ್ ಅವರನ್ನು ಮಂಡ್ಯ ಜಿಲ್ಲೆಗೆ ಹಾಗೂ ಮಂಜು ಅವರನ್ನು ಕೆಜಿಎಫ್ ಜಿಲ್ಲೆಯ ರಾಬರ್ಟ್‌ಸನ್ ಪೊಲೀಸ್ ಠಾಣೆ ವ್ಯಾಪ್ತಿಗೆ ಆರು ತಿಂಗಳ ಅವಧಿಗೆ ಗಡಿಪಾರು ಮಾಡುವಂತೆ ಆದೇಶಿಸಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕರ ಆದೇಶದಂತೆ, ಇಬ್ಬರನ್ನೂ ನಿಗದಿತ ಜಿಲ್ಲೆಗಳ ಪೊಲೀಸ್ ಠಾಣೆ ವ್ಯಾಪ್ತಿಗೆ ಕಳುಹಿಸುವ ಪ್ರಕ್ರಿಯೆಯನ್ನು ಮುಂಡಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಪೂರ್ಣಗೊಳಿಸಿದ್ದಾರೆ.




