ಹಲವು ದಿನಗಳಿಂದ ನಿರೀಕ್ಷೆಯಲ್ಲಿದ್ದ ಮುಂಗಾರು ಮಳೆ ಇದೀಗ ಉತ್ತರ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚುರುಕುಗೊಂಡಿದೆ. ಕಳೆದ ಎರಡು ದಿನಗಳಿಂದ ಕರಾವಳಿ ಮಾತ್ರವಲ್ಲದೆ ಘಟ್ಟದ ಮೇಲ್ಭಾಗದ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾಗುತ್ತಿದ್ದು, ಮಳೆಯ ಕೊರತೆಯಿಂದ ಆತಂಕದಲ್ಲಿದ್ದ ರೈತರು, ಅಡಿಕೆ ಬೆಳೆಗಾರರು ಹಾಗೂ ಜನರಲ್ಲಿ ಹೊಸ ಆಶಾಭಾವನೆ ಮೂಡಿದೆ.
ಈ ಬಾರಿ ಮುಂಗಾರು ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಜಿಲ್ಲೆಯ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಕೃಷಿ ಚಟುವಟಿಕೆಗಳು ಸಹ ಮಂದಗತಿಯಲ್ಲಿ ಸಾಗಿದ್ದವು. ಆದರೆ ಈಗ ಸುರಿಯುತ್ತಿರುವ ಮಳೆ ಭತ್ತದ ನಾಟಿ ಸೇರಿದಂತೆ ವಿವಿಧ ಕೃಷಿ ಕಾರ್ಯಗಳಿಗೆ ಅನುಕೂಲಕರ ವಾತಾವರಣ ನಿರ್ಮಿಸಿದೆ.
ಆರಿದ್ರಾ ನಕ್ಷತ್ರದ ಅವಧಿಯಲ್ಲಿ ಉತ್ತಮ ಮಳೆಯಾಗುವುದು ಕೃಷಿ ಬೆಳವಣಿಗೆಗೆ ಪೂರಕವೆಂದು ರೈತರು ನಂಬಿದ್ದು, ಇದೀಗ ಅದೇ ಸಮಯದಲ್ಲಿ ಮಳೆ ಚುರುಕುಗೊಂಡಿರುವುದು ಕೃಷಿ ವಲಯದಲ್ಲಿ ಉತ್ಸಾಹ ಹೆಚ್ಚಿಸಿದೆ. ಅಡಿಕೆ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳಿಗೆ ಈ ಮಳೆ ಹೆಚ್ಚಿನ ನೆರವಾಗಲಿದೆ ಎನ್ನಲಾಗಿದೆ.
ಈ ಸುದ್ದಿ ಓದಿದ್ದೀರಾ? ಯಲ್ಲಾಪುರ | ಅಪರೂಪದ ಬಿಳಿ ಕಾಗೆ ಪ್ರತ್ಯಕ್ಷ: ಶಾಲಾ ಮಕ್ಕಳಲ್ಲಿ ಮೂಡಿದ ಕುತೂಹಲ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರಾಸರಿ 41.8 ಮಿ.ಮೀ. ಮಳೆ ದಾಖಲಾಗಿದೆ. ಹೊನ್ನಾವರದಲ್ಲಿ 101 ಮಿ.ಮೀ., ಕಾರವಾರದಲ್ಲಿ 90.3 ಮಿ.ಮೀ., ಕುಮಟಾದಲ್ಲಿ 74.2 ಮಿ.ಮೀ. ಹಾಗೂ ಭಟ್ಕಳದಲ್ಲಿ 72.9 ಮಿ.ಮೀ. ಮಳೆಯಾಗಿದೆ. ಇನ್ನೊಂದೆಡೆ ಮುಂಡಗೋಡದಲ್ಲಿ 8.1 ಮಿ.ಮೀ. ಹಾಗೂ ಯಲ್ಲಾಪುರದಲ್ಲಿ 14.3 ಮಿ.ಮೀ. ಮಳೆಯಾಗಿದೆ.
ಆದರೆ ಜೂನ್ 1ರಿಂದ 29ರವರೆಗಿನ ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸುರಿಯಬೇಕಿದ್ದ 656.1 ಮಿ.ಮೀ. ಮಳೆಯ ಬದಲಿಗೆ 321.5 ಮಿ.ಮೀ. ಮಾತ್ರ ದಾಖಲಾಗಿದ್ದು, ಶೇ.51ರಷ್ಟು ಮಳೆ ಕೊರತೆಯಾಗಿದೆ. ನಿರಂತರ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲೂ ಏರಿಕೆ ಕಂಡುಬಂದಿದೆ.
ಕದ್ರಾ ಜಲಾಶಯದಲ್ಲಿ 29.75 ಮೀ., ಕೊಡಸಳ್ಳಿ ಜಲಾಶಯದಲ್ಲಿ 69.30 ಮೀ., ಸೂಪಾ ಜಲಾಶಯದಲ್ಲಿ 525.28 ಮೀ., ತಟ್ಟಿಹಳ್ಳ ಜಲಾಶಯದಲ್ಲಿ 451.39 ಮೀ., ಜೋಗ ಜಲಾಶಯದಲ್ಲಿ 434.46 ಮೀ. ಹಾಗೂ ಗೇರುಸೊಪ್ಪ ಜಲಾಶಯದಲ್ಲಿ 47.53 ಮೀ. ನೀರಿನ ಮಟ್ಟ ದಾಖಲಾಗಿದೆ. ಲಿಂಗನಮಕ್ಕಿ ಜಲಾಶಯದಲ್ಲಿ 1744.80 ಮೀ. ನೀರಿನ ಮಟ್ಟವಿದ್ದು, ಒಳಹರಿವು ಮತ್ತು ಸಂಗ್ರಹ ಪ್ರಮಾಣವೂ ಕ್ರಮೇಣ ಹೆಚ್ಚುತ್ತಿದೆ.
ಮಳೆಯ ಪರಿಣಾಮ ಹಲವು ಕಡೆ ಬಾವಿ ಹಾಗೂ ಕೊಳವೆಬಾವಿಗಳ ನೀರಿನ ಮಟ್ಟದಲ್ಲಿ ಏರಿಕೆಯ ಲಕ್ಷಣಗಳು ಗೋಚರಿಸುತ್ತಿವೆ. ಮಳೆಯು ಇದೇ ರೀತಿ ಮುಂದುವರಿದರೆ ಅಂತರ್ಜಲ ಮಟ್ಟ ಮತ್ತಷ್ಟು ಸುಧಾರಿಸಿ, ಕುಡಿಯುವ ನೀರಿನ ಸಮಸ್ಯೆ ತಗ್ಗುವ ನಿರೀಕ್ಷೆ ಇದೆ. ಅದೇ ರೀತಿ ಒಣಗಿದ್ದ ಹಳ್ಳ-ಕೊಳ್ಳಗಳು ಹಾಗೂ ಸಣ್ಣ ಜಲಮೂಲಗಳಲ್ಲಿ ಮತ್ತೆ ನೀರಿನ ಹರಿವು ಆರಂಭವಾಗಿದ್ದು, ಅರಣ್ಯ ಪ್ರದೇಶಗಳಲ್ಲಿನ ಜಲಮೂಲಗಳಿಗೂ ಜೀವ ಬಂದಿದೆ. ಜಾನುವಾರುಗಳಿಗೆ ನೀರಿನ ಲಭ್ಯತೆ ಹೆಚ್ಚಾಗಿರುವುದು ಗ್ರಾಮೀಣ ಭಾಗದ ಜನರಿಗೆ ನೆಮ್ಮದಿ ತಂದಿದೆ.
ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದರೂ, ಈ ಮುಂಗಾರಿನಲ್ಲಿ ಇನ್ನೂ ಮಳೆ ಕೊರತೆ ಸಂಪೂರ್ಣವಾಗಿ ನೀಗಿಲ್ಲ. ಕೃಷಿ ಹಾಗೂ ಜಲಾಶಯಗಳ ಭರ್ತಿಗೆ ಮುಂದಿನ ದಿನಗಳಲ್ಲಿಯೂ ಉತ್ತಮ ಮಳೆ ಅಗತ್ಯವಾಗಿದ್ದು, ಇದೇ ರೀತಿಯ ಮಳೆ ಮುಂದುವರಿಯಲಿ ಎಂಬುದು ರೈತರ ಹಾಗೂ ಜಿಲ್ಲೆಯ ಜನರ ಆಶಯವಾಗಿದೆ.




