ಮುಂಡಗೋಡ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಅವರು ಗುರುವಾರ ಪಟ್ಟಣದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಚೇರಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೊದಲಿಗೆ ಆರ್.ಡಬ್ಲ್ಯೂ.ಎಸ್. ಕಚೇರಿಗೆ ಭೇಟಿ ನೀಡಿದ ಸಿಇಒ ಅವರು, ಕಚೇರಿಯ ದಾಸ್ತಾನು ಕೊಠಡಿ, ಸಿಬ್ಬಂದಿ ಹಾಜರಾತಿ ವಹಿ, ಚಲನ-ವಲನ ವಹಿ ಹಾಗೂ ನಗದು ಪುಸ್ತಕ ಸೇರಿದಂತೆ ಪ್ರಮುಖ ಕಡತಗಳನ್ನು ಕೂಲಂಕಷವಾಗಿ ಪರಿಶೀಲಿಸಿದರು.
ಕಚೇರಿ ನಿರ್ವಹಣೆಯಲ್ಲಿ ಕಂಡುಬಂದ ಲೋಪದೋಷಗಳ ಕುರಿತು ಅಧಿಕಾರಿಗಳಿಗೆ ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. ಬೇಸಿಗೆ ಕಾಲ ಆರಂಭವಾಗುತ್ತಿರುವುದರಿಂದ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ನೀರಿನ ತೊಂದರೆ ಎದುರಾಗುವ ಗ್ರಾಮಗಳನ್ನು ಗುರುತಿಸಿ, ಅಲ್ಲಿಗೆ ತಕ್ಷಣವೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅಷ್ಟೇ ಅಲ್ಲದೆ, ಶಾಶ್ವತ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಸೂಕ್ತ ಯೋಜನೆಗಳನ್ನು ರೂಪಿಸಿ ಶೀಘ್ರವಾಗಿ ಪ್ರಸ್ತಾವನೆ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಈ ಸುದ್ದಿ ಓದಿದ್ದೀರಾ ? ಉತ್ತರ ಕನ್ನಡ | ಮಾಜಿ ಶಾಸಕ ವಿ.ಎಸ್. ಪಾಟೀಲ್ ಮುಂದಿನ ನಡೆ ಏನು? ಕಾಂಗ್ರೆಸ್ ಪಾಳಯದಲ್ಲಿ ಕುತೂಹಲ
ಇದಾದ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಚೇರಿಗೂ ಭೇಟಿ ನೀಡಿದ ಡಾ. ದಿಲೀಷ ಶಸಿ ಅವರು, ಕಚೇರಿಯ ಆವರಣ ಹಾಗೂ ದಾಸ್ತಾನು ಮಳಿಗೆಗಳನ್ನು ವೀಕ್ಷಿಸಿದರು. ಕಚೇರಿ ಕೆಲಸಗಳಲ್ಲಿನ ಕುಂದುಕೊರತೆಗಳ ಬಗ್ಗೆ ಸಿಬ್ಬಂದಿಯೊಂದಿಗೆ ಚರ್ಚಿಸಿ, ಸಾರ್ವಜನಿಕ ಕೆಲಸಗಳನ್ನು ವಿಳಂಬ ಮಾಡದಂತೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್. ದಾಸನಕೊಪ್ಪ, ಸಹಾಯಕ ನಿರ್ದೇಶಕ ಸೋಮಲಿಂಗಪ್ಪ ಛಬ್ಬಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ರಾಜೇಶ್ವರಿ ಕದಂ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಅಭಿಯಂತರರಾದ ದೀಪಾ ಎಸ್. ಶೆಡಗೇರಿ, ಕಿರಿಯ ಅಭಿಯಂತರ ಪ್ರದೀಪ ಭಟ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.




