ಪತ್ರಿಕೆ ಓದುವ ಹವ್ಯಾಸವು ವಿದ್ಯಾರ್ಥಿಗಳ ಜ್ಞಾನ ವೃದ್ಧಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬರೂ ದಿನಪತ್ರಿಕೆ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ಮಾಜಿ ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಕರೆ ನೀಡಿದರು.
ಮೈಸೂರು ನಗರದ ಹಳೆ ಸಂತೆಪೇಟೆಯಲ್ಲಿ ಮಯೂರ ಕನ್ನಡ ಯುವಕರ ಬಳಗ ವತಿಯಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಕನ್ನಡ ದಿನಪತ್ರಿಕೆಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿದಿನ ಹೊಸ ಸವಾಲುಗಳು ಎದುರಾಗುತ್ತಿವೆ. ಸಾಮಾನ್ಯ ಜ್ಞಾನ, ವ್ಯವಹಾರಿಕ ಅರಿವು ಹಾಗೂ ಸಮಕಾಲೀನ ವಿದ್ಯಮಾನಗಳ ಬಗ್ಗೆ ಮಾಹಿತಿ ಪಡೆಯಲು ದಿನಪತ್ರಿಕೆಗಳು ಉತ್ತಮ ಮಾಧ್ಯಮವಾಗಿದ್ದು, ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆ ಓದುವ ದಿನಚರಿಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಪತ್ರಕರ್ತರಿಗೆ ಹಗಲು-ರಾತ್ರಿ ಎಂಬ ಭೇದವಿಲ್ಲದೆ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಕುಟುಂಬದವರೊಂದಿಗೆ ಸಮಯ ಕಳೆಯಲು ಸಹ ಅವರಿಗೆ ಅವಕಾಶ ಕಡಿಮೆಯಿರುತ್ತದೆ. ಇಂತಹ ಒತ್ತಡದ ನಡುವೆಯೂ ಸಮಾಜದ ಹಿತಕ್ಕಾಗಿ ದುಡಿಯುವ ಪತ್ರಕರ್ತರಿಗಾಗಿ ಕುಟುಂಬ ಸಮೇತರಾಗಿ ಭಾಗವಹಿಸುವ ಕಾರ್ಯಕ್ರಮಗಳನ್ನು ಆಯೋಜಿಸಲು ಪತ್ರಕರ್ತರ ಸಂಘ ಮುಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಮಾಜಸೇವಕ ರಘುರಾಮ್ ವಾಜಪೇಯಿ ಮಾತನಾಡಿ, ಮೈಸೂರು ನಿಜವಾದ ಅರ್ಥದಲ್ಲಿ ಪತ್ರಿಕೆಗಳ ತವರೂರು. ಮಂಗಳೂರು ಸಮಾಚಾರ ಕ್ರೈಸ್ತ ಮಿಷನರಿಗಳಿಂದ ಮಾಸಿಕವಾಗಿ ಪ್ರಕಟವಾಗಿದ್ದರೂ, ಸಾರ್ವಜನಿಕ ಪತ್ರಿಕಾ ಮುದ್ರಣಕ್ಕೆ ಮೈಸೂರು ಪ್ರಮುಖ ಕೇಂದ್ರವಾಗಿತ್ತು. ಆದ್ದರಿಂದ ಪತ್ರಿಕೋದ್ಯಮಕ್ಕೆ ಮೈಸೂರಿನಲ್ಲಿ ವಿಶಿಷ್ಟ ಸ್ಥಾನವಿದೆ. ಅಲ್ಲದೆ, ತಾತಯ್ಯನವರನ್ನು ಮಹಾತ್ಮ ಗಾಂಧೀಜಿ “ಪತ್ರಿಕಾರಂಗದ ಭೀಷ್ಮ” ಎಂದು ಕರೆದಿರುವುದು ಮೈಸೂರಿನ ಪತ್ರಿಕಾ ಪರಂಪರೆಯ ಹೆಗ್ಗಳಿಕೆಯನ್ನು ತೋರಿಸುತ್ತದೆ ಎಂದು ಹೇಳಿದರು.
ಈ ವಿಶೇಷ ಸುದ್ದಿ ಓದಿದ್ದೀರಾ?ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಶೇ.64ರಷ್ಟು ಬೋಧಕ ಹುದ್ದೆ ಖಾಲಿ: ಉನ್ನತ ಶಿಕ್ಷಣದ ಗುಣಮಟ್ಟಕ್ಕೆ ಗಂಭೀರ ಸವಾಲು
ದಿನಪತ್ರಿಕೆ ವಿತರಣೆ ವೇಳೆ ಕೆ.ಆರ್. ಬ್ಯಾಂಕ್ ಅಧ್ಯಕ್ಷ ಬಸವರಾಜ್ ಬಸಪ್ಪ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ. ರಾಘವೇಂದ್ರ, ಕೆ.ಎಂ.ಪಿ.ಕೆ. ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಎಸ್.ಎನ್. ರಾಜೇಶ್, ಹಿರಿಯ ಪತ್ರಿಕಾ ವಿತರಕಿ ರಮಾಬಾಯಿ, ರಾಕೇಶ್, ಹರೀಶ್ ನಾಯ್ಡು ಸೇರಿದಂತೆ ಹಲವರು ಇದ್ದರು.




