ವಿಶೇಷ ಸಮಗ್ರ ಪರಿಷ್ಕರಣೆ (SIR)-2026ರ ಅಂಗವಾಗಿ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರು ಭಾನುವಾರ ಪರಿಶೀಲಿಸಿ, ಇನ್ನೆರಡು ದಿನಗಳೊಳಗೆ ಶೇ.100%ರಷ್ಟು ಗಣತಿ ನಮೂನೆಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೆಲವು ಮತಗಟ್ಟೆಗಳು ಹಾಗೂ SIR ಫೆಸಿಲಿಟೇಶನ್ ಸೆಂಟರ್‌ಗಳಿಗೆ ಭೇಟಿ ನೀಡಿದ ಅವರು, ಬೂತ್ ಮಟ್ಟದ ಅಧಿಕಾರಿಗಳು (BLO) ಹಾಗೂ ಸಿಬ್ಬಂದಿಯೊಂದಿಗೆ ಕ್ಷೇತ್ರ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು. ಬಳಿಕ ಕೆಲವು ಮನೆಗಳಿಗೆ ತೆರಳಿ ಮತದಾರರಿಗೆ SIR ಸಂಬಂಧದ EF ನಮೂನೆಗಳನ್ನು ಸ್ವತಃ ವಿತರಿಸಿ, ಅವುಗಳನ್ನು ಸರಿಯಾಗಿ ಭರ್ತಿ ಮಾಡುವ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಆಯುಕ್ತರು, ವಿಶೇಷ ಸಮಗ್ರ ಪರಿಷ್ಕರಣೆಯ ಮಹತ್ವವನ್ನು ವಿವರಿಸಿ, ಪ್ರತಿಯೊಬ್ಬ ಅರ್ಹ ಮತದಾರರೂ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು. ಅಲ್ಲದೆ, ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಹುರಿದುಂಬಿಸಿ, ಪಾಲಿಕೆ ವ್ಯಾಪ್ತಿಯ ಮೂರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಹಾಗೂ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು (AERO) ಇನ್ನೆರಡು ದಿನಗಳೊಳಗೆ ಶೇ.100%ರಷ್ಟು ಗಣತಿ ನಮೂನೆಗಳನ್ನು ವಿತರಿಸುವಂತೆ ಸೂಚಿಸಿದರು.
ಮುಂದುವರಿದು, ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳ ಮತದಾರರು SIR ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡಬೇಕು. ಗಣತಿ ನಮೂನೆಗಳನ್ನು ಭರ್ತಿ ಮಾಡಿ ಸಂಬಂಧಿಸಿದ BLOಗಳಿಗೆ ಹಿಂತಿರುಗಿಸುವುದರ ಜೊತೆಗೆ, ತಮ್ಮ ವಾರ್ಡ್‌ಗಳಲ್ಲಿ ತೆರೆಯಲಾಗಿರುವ ಫೆಸಿಲಿಟೇಶನ್ ಸೆಂಟರ್‌ಗಳಲ್ಲಿ ಅಗತ್ಯ ಮಾಹಿತಿ ಹಾಗೂ ನೆರವು ಪಡೆದು ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಅವರು ಮನವಿ ಮಾಡಿದರು.
ಈ ಸುದ್ಧಿ ಓದಿದ್ದೀರಾ?ಕೊಡಗು | 2027ರ ಕೊಡವ ಹಾಕಿ ಉತ್ಸವದ ಆತಿಥ್ಯ ಹಕ್ಕು ಅಜ್ಜಿಕುಟ್ಟಿರ ಕುಟುಂಬಕ್ಕೆ ಹಸ್ತಾಂತರ
ಪರಿಶೀಲನೆ ವೇಳೆ ಪಾಲಿಕೆ ಹೆಚ್ಚುವರಿ ಆಯುಕ್ತೆ ಬಿ.ಎನ್. ವೀಣಾ, ವಲಯ ಆಯುಕ್ತ ಮಂಜುನಾಥ ರೆಡ್ಡಿ, ಸಹಾಯಕ ಕಂದಾಯಾಧಿಕಾರಿ ಪ್ರಸಾದ್, ಕಂದಾಯ ನಿರೀಕ್ಷಕ ಅರವಿಂದ ಹಾಗೂ ಬೂತ್ ಮಟ್ಟದ ಅಧಿಕಾರಿ ರವಿಶಂಕರ್ ಸೇರಿದಂತೆ ಸಿಬ್ಬಂದಿ ಇದ್ದರು.




