ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಉಪಾಧ್ಯಕ್ಷ ಹಾಗೂ ಸಾಮಾಜಿಕ ಕಾರ್ಯಕರ್ತ ಕೋಟದ ನಾಗೇಂದ್ರ ಪುತ್ರನ್ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ, ಜೋಡಿ ಕೊಲೆ ಪ್ರಕರಣದ ಆರೋಪಿ ರಾಘವೇಂದ್ರ ಕಾಂಚನ್ ಮತ್ತು ಆತನ ಸಹಚರ ಜಯಂತ್ ಪುತ್ರನ್ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿಯ ಪ್ರಕಾರ, ನಾಗೇಂದ್ರ ಪುತ್ರನ್ ಅವರು ಕೋಟದಲ್ಲಿ ನಡೆದಿದ್ದ ಭರತ್ ಮತ್ತು ಯತೀಶ್ ಎಂಬ ಯುವಕರ ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಹೋರಾಡಿದಾಗ, ಆ ಪ್ರಕರಣದ ಆರೋಪಿ ರಾಘವೇಂದ್ರ ಕಾಂಚನ್ ಅವರಿಗೆ ವಿರೋಧ ವ್ಯಕ್ತಪಡಿಸಿದ್ದರು. ನಂತರ ನ್ಯಾಯಾಲಯದ ಬಂಧನದಿಂದ ಬಿಡುಗಡೆಯಾದ ರಾಘವೇಂದ್ರ ಕಾಂಚನ್, ನಾಗೇಂದ್ರ ಪುತ್ರನ್ ವಿರುದ್ಧ ವೈಯಕ್ತಿಕ ದ್ವೇಷ ಬೆಳೆಸಿಕೊಂಡು, “ಅವನನ್ನು ಬಿಟ್ಟುಬಿಡೋದಿಲ್ಲ, ವಾಶ್ ಔಟ್ ಮಾಡುತ್ತೇನೆ” ಎಂಬ ಹೇಳಿಕೆಗಳನ್ನು ನೀಡಿ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಇದಾದ ನಂತರ ಮಲ್ಪೆ ಮಹಾಲಕ್ಷ್ಮೀ ಬ್ಯಾಂಕ್ ಹಗರಣ ವಿಚಾರದಲ್ಲಿ ನಾಗೇಂದ್ರ ಪುತ್ರನ್ ಸಾಮಾಜಿಕ ಹೋರಾಟ ನಡೆಸುತ್ತಿದ್ದುದರಿಂದ, ಆರೋಪಿಗಳು ಇನ್ನಷ್ಟು ಕೋಪಗೊಂಡು ನಾಗೇಂದ್ರ ಪುತ್ರನ್ ಮತ್ತು ಅವರ ಆಪ್ತರಿಗೆ ಪುನಃಪುನಃ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

This video cannot be played in your browser. Open the video directly
ನಾಗೇಂದ್ರ ಪುತ್ರನ್ ಅವರ ಸ್ನೇಹಿತ ಕಿಶೋರ್ ಶೆಟ್ಟಿ ಅವರಿಗೆ ಜುಲೈ 17ರಂದು ಆರೋಪಿಗಳು ಕರೆ ಮಾಡಿ – “ನಿನ್ನ ಸ್ನೇಹಿತಗೆ ಬುದ್ಧಿ ಹೇಳು, ಇಲ್ಲದಿದ್ದರೆ ಒಂದು ವಾರದೊಳಗೆ ಜೀವದಿಂದ ತೆಗೆಯುವುದು ಗ್ಯಾರಂಟಿ” ಎಂದು ಬೆದರಿಕೆ ಹಾಕಿದ್ದಾರೆ. ಬಳಿಕ “ಅವನು ಬೆಂಗಳೂರಿಗೆ ಓಡಿ ಹೋಗಿದ್ದಾನೆ, ಅಲ್ಲೇ ಮುಗಿಸುತ್ತೇನೆ” ಎಂದು ಮತ್ತೊಮ್ಮೆ ಕರೆಮಾಡಿರುವುದಾಗಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ, ನಾಗೇಂದ್ರ ಪುತ್ರನ್ ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರಿಗೆ ದೂರು ನೀಡಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಕೊಲೆ ಬೆದರಿಕೆ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2019ರ ಜ.26ರಂದು ಅವಳಿ ಕೊಲೆ ಪ್ರಕರಣದಲ್ಲಿ ಕೋಟತಟ್ಟು ಗ್ರಾಮದ ಬಾರಿಕೇರಿ ನಿವಾಸಿ ರಾಘವೇಂದ್ರ ಕಾಂಚನ್ ಯಾನೆ ಬಾರಿಕೇರಿ ರಾಘು, ಕೃತ್ಯದ ಒಳ ಸಂಚು ನಡೆಸಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಅದರಂತೆ ಆರೋಪಿಯನ್ನು ಪೊಲೀಸರು ಫೆ.7ರಂದು ಬಂಧಿಸಿದ್ದರು. ಬಳಿಕ ಪ್ರಕರಣದ ಆರೋಪಿಗಳ ವಿರುದ್ಧ ದೋಷಾರೋಪಣಾ ಪತ್ರವನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಈನ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಸ್ತುತ ಕಲಂ 313 ದಂಡ ಪ್ರಕ್ರಿಯಾ ಸಂಹಿತೆಯಡಿ ಯಲ್ಲಿ ಆರೋಪಿ ಹೇಳಿಕೆಯ ಹಂತದಲ್ಲಿದೆ. ಪ್ರಕರಣದ 9ನೇ ಆರೋಪಿಯಾಗಿರುವ ರಾಘವೇಂದ್ರ ಕಾಂಚನ್‌ಗೆ 2023ರ ಜೂ.28ರಂದು ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿ ಬಿಡುಗಡೆ ಮಾಡಿತ್ತು.






