ಸದ್ಯ ರಾಜ್ಯ ರಾಜಕಾರಣದಲ್ಲಿ ತೆಲುಗು-ಕನ್ನಡ ಮಿಶ್ರಿತ ಡೈಲಾಗ್‌ಗಳಿಂದ ಅಬ್ಬರಿಸಿ ಬೊಬ್ಬಿರಿಯುತ್ತಿರುವವರು ಶಾಸಕ ಪ್ರದೀಪ್ ಈಶ್ವರ್. ಹಳ್ಳಿಗಳನ್ನು ಸುತ್ತುತ್ತ, ಹಲವು ಜನರನ್ನು ಮಾತನಾಡಿಸುತ್ತ, ಅದೆಲ್ಲವಲ್ಲೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಜನಪ್ರಿಯತೆ ಗಳಿಸುತ್ತಿದ್ದಾರೆ. ಅವರು ಇತ್ತೀಚೆಗೆ, ‘ನಮಸ್ತೆ ಚಿಕ್ಕಬಳ್ಳಾಪುರ’ ಕಾರ್ಯಕ್ರಮ ಮಾಡಿ, ಅಸಹಾಯಕರಿಗೆ ಹಣಕಾಸಿನ ನೆರವು ನೀಡುವುದಾಗಿ ಘೋಷಿಸಿದ್ದರು. ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದನ್ನು ಗಮನಿಸಿದ್ದ ಕಲಬುರಗಿಯ ಬಡ ವೃದ್ಧೆಯೊಬ್ಬರು ಚಿಕ್ಕಬಳ್ಳಾಪುರಕ್ಕೆ ಬಂದಿದ್ದರು. ಆದರೆ, ಶಾಸಕ ಪ್ರದೀಪ್ ಈಶ್ವರ್ ಅವರನ್ನು ಭೇಟಿ ಮಾಡಲಾಗದೆ ಬರಿಗೈನಲ್ಲಿ ವಾಪಸ್ ಹೋಗಿದ್ದಾರೆ.
ಕಲಬುರಗಿಯ ವೃದ್ಧೆ ಕಮಲಾಬಾಯಿ ಅವರ ಮಗ ಮಂಜುನಾಥ್ ಅವರಿಗೆ ಕಳೆದ ವರ್ಷ ಮೆದುಳಿನ ಶಸ್ತ್ರಚಿಕಿತ್ಸೆ ನಡೆದಿತ್ತು. ಶಸ್ತ್ರಚಿಕಿತ್ಸೆಗಾಗಿ ಬಡ ವೃದ್ಧೆ ಮತ್ತು ಆಕೆಯ ಮಗ ಸಾಲ ಮಾಡಿ ಹಣ ಹೊಂದಿಸಿದ್ದರು. ಶಸ್ತ್ರಚಿಕಿತ್ಸೆ ಯಶಸ್ವಿಯಾದರೂ, ನಂತರದ ದಿನಗಳಲ್ಲಿ ಅವರಿಗೆ ಬದುಕು ಸಾಗಿಸುವುದು ದುಸ್ತರವಾಗಿತ್ತು. ಸಾಲಗಾರರು ಮನೆ ಮುಂದೆ ಬಂದು ಹಣಕ್ಕಾಗಿ ಮತ್ತೆ ಮತ್ತೆ ಪೀಡಿಸುತ್ತಿದ್ದರು.
ವೃದ್ಧೆ ಮತ್ತು ಆಕೆಯ ಮಗ ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಿದ್ದರು. ಹಿಂದಿನ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರನ್ನೂ ಭೇಟಿ ಮಾಡಿದ್ದರು. ಆದರೆ, ಅವರಿಗೆ ಒಂದು ರೂಪಾಯಿ ಪರಿಹಾರವಾಗಲಿ, ಸಹಾಯಧನವಾಗಲಿ ಸಿಕ್ಕಿರಲಿಲ್ಲ.
ಈ ಸುದ್ದಿ ಓದಿದ್ದೀರಾ?: ಓದಿದ್ದು ಪಿಯುಸಿ, ವೃತ್ತಿ ಮೆಡಿಕಲ್ ಮೇಷ್ಟ್ರು; ‘ದೈತ್ಯ ಸಂಹಾರಿ’ ಪ್ರದೀಪ್ ಈಶ್ವರ್ ನಿಜಕ್ಕೂ ಎಂಥವರು?
ತಮ್ಮ ಬದುಕು ಇಷ್ಟೇ ಎಂದು ಭಾವಿಸಿ ನಿರಾಶೆಯಲ್ಲಿ ಜೀವನ ದೂಡುತ್ತಿದ್ದ ವೃದ್ಧೆ ಮತ್ತು ಆಕೆಯ ಮಗನಿಗೆ ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪ್ರದೀಪ್ ಈಶ್ವರ್ ಹೊಸ ಭರವಸೆಯಾಗಿ ಕಂಡಿದ್ದರು. ಅವರನ್ನು ಭೇಟಿ ಮಾಡಲು, ಕಲಬುರಗಿಯಿಂದ ಚಿಕ್ಕಬಳ್ಳಾಪುರಕ್ಕೆ 500 ಕಿ.ಮೀ. ಪ್ರಯಾಣ ಮಾಡಿ ಬಂದಿದ್ದರು. ಆದರೆ, ಅವರಿಗೆ ಶಾಸಕ ಪ್ರದೀಪ್ ಈಶ್ವರ್ ಸಂಪರ್ಕಕ್ಕೆ ಸಿಗಲಿಲ್ಲ. ಪರಿಣಾಮ ಮತ್ತದೇ ನಿರಾಶೆಯಿಂದ ವಾಪಸ್ ತೆರಳಿದ್ದಾರೆ.
“ಬಹಳಷ್ಟು ಮಂದಿಗೆ ಶಾಸಕ ಪ್ರದೀಪ್ ಈಶ್ವರ್ ಸಹಾಯ ಮಾಡುತ್ತಿದ್ದಾರೆಂದು ನಮಗೆ ಗೊತ್ತಾಯಿತು. ಅವರ ನೆರವು ಕೇಳಲು ತಮ್ಮೂರಿಂದ ಚಿಕ್ಕಬಳ್ಳಾಪುರಕ್ಕೆ ಬಂದೆವು. ಆದರೆ, ಅವರು ಸಿಗಲಿಲ್ಲ. ಫೋನ್ ಮೂಲಕವೂ ಸಂಪರ್ಕಿಸಿದೆವು, ಅವರು ಫೋನ್ ಕರೆಯನ್ನೂ ಸ್ವೀಕರಿಸಲಿಲ್ಲ” ಎಂದು ವೃದ್ಧೆ ಕಮಲಾಬಾಯಿ ಹೇಳಿದ್ದಾರೆ.