ಮೈಸೂರು ತಾಲ್ಲೂಕಿನ ಜಯಪುರ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿ ಜಯರಾಮ್ ಅವರ ಅಧ್ಯಕ್ಷತೆಯಲ್ಲಿ ರಸಗೊಬ್ಬರ ಅಂಗಡಿಗಳ ಮಾಲೀಕರು ಹಾಗೂ ರೈತ ಮುಖಂಡರ ಸಭೆ ನಡೆಯಿತು. ಸಭೆಯಲ್ಲಿ ರಸಗೊಬ್ಬರ ಮತ್ತು ಕೃಷಿ ಔಷಧಗಳ ಮಾರಾಟದಲ್ಲಿನ ಅಕ್ರಮಗಳ ಕುರಿತು ರೈತ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಮಾತನಾಡಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕೆಲ ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ಅಗತ್ಯವಿರುವ ರಸಗೊಬ್ಬರ ಹಾಗೂ ಕೃಷಿ ಔಷಧಿಗಳನ್ನು ನಿಯಮಾನುಸಾರ ಮಾರಾಟ ಮಾಡದೇ, ಅಂಗಡಿ ಮಾಲೀಕರ ಇಚ್ಛೆಯಂತೆ ವ್ಯವಹಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ನಿಗದಿಪಡಿಸಿರುವ ದರಕ್ಕೆ ಮಾರಾಟ ಮಾಡದಿರುವುದು, ಅಂಗಡಿಗಳಲ್ಲಿರುವ ದಾಸ್ತಾನು ಹಾಗೂ ಬೆಲೆಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸದಿರುವುದು ರೈತರಿಗೆ ವಂಚನೆಯಾಗುತ್ತಿದೆ ಎಂದು ದೂರಿದರು.
ರೈತರು ಬೆಳೆದ ಬೆಳೆಗಳಿಗೆ ರೋಗದ ಲಕ್ಷಣಗಳ ಕುರಿತು ಮಾಹಿತಿ ನೀಡಿದಾಗ, ಅಗತ್ಯಕ್ಕೆ ಮೀರಿ ಔಷಧಿಗಳನ್ನು ಪ್ಯಾಕೇಜ್ ರೂಪದಲ್ಲಿ ಒಂದು ಎಕರೆಗೆ ₹5,000 ರಿಂದ ₹6,000 ವರೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿತು. ಈಗಾಗಲೇ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ಸಂಕಷ್ಟದಲ್ಲಿರುವಾಗ, ಇಂತಹ ಕ್ರಮಗಳು ರೈತರ ಮೇಲಿನ ಹೆಚ್ಚುವರಿ ಹೊರೆ ಹೆಚ್ಚಿಸುತ್ತಿವೆ ಎಂದು ಅವರು ಹೇಳಿದರು.
ರಸಗೊಬ್ಬರ ಹಾಗೂ ಕೃಷಿ ಔಷಧ ಅಂಗಡಿಗಳಲ್ಲಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ಸಮರ್ಪಕ ನಿಗಾವಹಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಾಗರಾಜ್ ಒತ್ತಾಯಿಸಿದರು.
ಕೃಷಿ ಸಲಕರಣೆಗಳ ಮಾರಾಟದಲ್ಲಿಯೂ ಬೆಲೆಪಟ್ಟಿ ಪ್ರದರ್ಶಿಸದೆ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ನಡೆಯುವ ಸಭೆಗಳಿಗೆ ಹಾರ್ಡ್‌ವೇರ್ ಅಂಗಡಿಗಳ ಮಾಲೀಕರು, ಸಂಬಂಧಿತ ನಿಯಂತ್ರಣ ಅಧಿಕಾರಿಗಳು ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಆಹ್ವಾನಿಸಿ ಜಂಟಿ ಸಭೆ ನಡೆಸುವಂತೆ ಕೃಷಿ ಇಲಾಖೆಗೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ರಾಮನಗರ, ಚನ್ನಪಟ್ಟಣ ಮುಸ್ಲಿಂ ಮತದಾರರ ಕುರಿತು ಕುಮಾರಸ್ವಾಮಿ ಆರೋಪಗಳು ನಿರಾಧಾರ: ವಕ್ತಾರ ರಾಜೇಶ್
ಸಭೆಯಲ್ಲಿ ಜಯಪುರ ಹೋಬಳಿಯ ಕೃಷಿ ಅಧಿಕಾರಿ ಅರುಣ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಮಾರ್ಬಳ್ಳಿ ನೀಲಕಂಠಪ್ಪ, ತಾಲೂಕು ಪ್ರಧಾನ ಕಾರ್ಯದರ್ಶಿ ಕಾಟೂರು ಮಹಾದೇವಸ್ವಾಮಿ, ಜಯಪುರ ಹೋಬಳಿ ಅಧ್ಯಕ್ಷ ಚುಂಚುರಾಯನಹುಂಡಿ ನಂಜುಂಡಸ್ವಾಮಿ, ಮುಖಂಡರಾದ ಶಿವಣ್ಣ, ಪುಟ್ಟಸ್ವಾಮಿ, ಮಾದೇಶ್, ಶ್ರೀಕಂಠ, ಸೋಮಶೇಖರ್, ಸಿದ್ದರಾಮ, ಬಸವರಾಜು, ಮಹೇಶ್, ನಂದೀಶ್, ಚಾಮರಾಜು ಸೇರಿದಂತೆ ರಸಗೊಬ್ಬರ ಅಂಗಡಿಗಳ ಮಾಲೀಕರು ಇದ್ದರು.




