ಸಿಂಧನೂರು ತಾಲ್ಲೂಕಿನ ಬೂದಿಹಾಳ ಕ್ಯಾಂಪಿನಲ್ಲಿ ಕೆಳಭಾಗದ ರೈತರಿಗೆ ನೀರಿನ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿ ನಡೆದ ರೈತರ ಪ್ರತಿಭಟನೆಯಲ್ಲಿ ರಾಜಕೀಯ ಭಾಷಣದ ವಿಚಾರವಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಣಾಮ ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್ ಯುವ ಮುಖಂಡ ಅಭಿಷೇಕ ನಾಡಗೌಡ, ಮೇಲ್ಭಾಗದ ರೈತರು ಹೆಚ್ಚಿನ ಪ್ರಮಾಣದಲ್ಲಿ ನೀರು ಬಳಸಿಕೊಳ್ಳುತ್ತಿರುವುದರಿಂದ ಸಿಂಧನೂರಿನ ವಿವಿಧ ಕಾಲುವೆಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ ಎಂದು ಆರೋಪಿಸಿದರು. ರೈತರ ಸಮಸ್ಯೆಗಳನ್ನು ಪರಿಹರಿಸಬೇಕಾದ ಜನಪ್ರತಿನಿಧಿಗಳೇ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಜೋಳ ಬೆಳೆದ ರೈತರಿಗೆ ಇನ್ನೂ ಹಣ ಪಾವತಿಯಾಗಿಲ್ಲ ಏಕೆ ಎಂದು ಪ್ರಶ್ನಿಸಿದರು.
ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಮುಖಂಡ ವೀರರಾಜು, ‘ಜೋಳದ ಹಣವನ್ನು ಕುಮಾರಸ್ವಾಮಿ ಕೊಡಿಸಬೇಕು’ ಎಂದು ಹೇಳಿದಾಗ ಅಭಿಷೇಕ ನಾಡಗೌಡ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೆಲಕಾಲ ಪ್ರತಿಭಟನಾ ಸ್ಥಳದಲ್ಲಿ ಗಲಾಟೆಯ ವಾತಾವರಣ ನಿರ್ಮಾಣವಾಯಿತು.
ಸ್ಥಳಕ್ಕೆ ಆಗಮಿಸಿದ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಮೌನೇಶ ರಾಠೋಡ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ಮಾತನಾಡಿದ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ರೈತರ ಸಮಸ್ಯೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಎಲ್ಲರೂ ಒಗ್ಗಟ್ಟಾಗಿ ರೈತರಿಗೆ ನೀರು ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ತಿಂಗಳೊಳಗೆ ಮೂವರು ದಲಿತರ ಹತ್ಯೆ: ದಲಿತಪರ ಹೋರಾಟಗಾರರ ಕಳವಳ
ಘಟನೆಯಿಂದ ಅಸಮಾಧಾನಗೊಂಡ ರೈತರು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮೊದಲು ನೀರಿನ ಸಮಸ್ಯೆ ಬಗೆಹರಿಸುವತ್ತ ಗಮನಹರಿಸಬೇಕು ಎಂದು ಮುಖಂಡರಿಗೆ ಮನವಿ ಮಾಡಿದರು





