ಜಿಲ್ಲಾಧಿಕಾರಿಗಳ ಅಧಿಕೃತ ಫೇಸ್‌ಬುಕ್ ಖಾತೆಯಾದ ‘ಡೆಪ್ಯೂಟಿ ಕಮಿಷನರ್ ರಾಯಚೂರು’ನಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯ, ಸಲಹೆ, ಆಕ್ಷೇಪಣೆ ಹಾಗೂ ಸಮಸ್ಯೆಗಳನ್ನು ಕಾಮೆಂಟ್‌ಗಳ ಮೂಲಕ ವ್ಯಕ್ತಪಡಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿ ವಕೀಲ ಶಿವರಾಜ್ ಮೋತಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ಫೇಸ್‌ಬುಕ್ ಪುಟವನ್ನು ಜಿಲ್ಲಾಡಳಿತದ ಸರ್ಕಾರಿ ಮಾಹಿತಿ, ಪ್ರಕಟಣೆಗಳು, ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರಿಗೆ ಸಂಬಂಧಿಸಿದ ಮಾಹಿತಿಯನ್ನು ತಲುಪಿಸುವ ಪ್ರಮುಖ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಬಳಸಲಾಗುತ್ತಿದೆ. ಆದರೆ ನೂತನ ಜಿಲ್ಲಾಧಿಕಾರಿಗಳು ಅಧಿಕಾರ ವಹಿಸಿಕೊಂಡ ಬಳಿಕದಿಂದ ಪುಟದಲ್ಲಿ ಸಾರ್ವಜನಿಕರ ಕಾಮೆಂಟ್ ಹಾಗೂ ಪ್ರತಿಕ್ರಿಯೆಗಳಿಗೆ ನಿರ್ಬಂಧ ವಿಧಿಸಿರುವುದು ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಸಮಸ್ಯೆ, ಸಲಹೆ, ಆಕ್ಷೇಪಣೆ ಅಥವಾ ಪ್ರಶ್ನೆಗಳನ್ನು ಪ್ರತಿಕ್ರಿಯೆಯ ರೂಪದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲು ಸಾಧ್ಯವಾಗುತ್ತಿಲ್ಲ. ಕಾಮೆಂಟ್ ವಿಭಾಗವನ್ನು ಯಾವ ಕಾರಣಕ್ಕಾಗಿ ನಿರ್ಬಂಧಿಸಲಾಗಿದೆ ಎಂಬುದು ಸಾರ್ವಜನಿಕರಿಗೆ ತಿಳಿದಿಲ್ಲ ಎಂದು ಶಿವರಾಜ್ ಮೋತಿ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೇವದುರ್ಗ | ಶಿಥಿಲಗೊಂಡ ರಾಮದುರ್ಗ ಸರ್ಕಾರಿ ಪ್ರೌಢಶಾಲೆ: ಹೊಸ ಕಟ್ಟಡಕ್ಕೆ ಬಾಷಾ ಶ್ಯಾನೆರ ಆಗ್ರಹ
ಸಾರ್ವಜನಿಕ ಹಿತಾಸಕ್ತಿ ಹಾಗೂ ನಾಗರಿಕರ ಹಕ್ಕುಗಳ ದೃಷ್ಟಿಯಿಂದ ಫೇಸ್‌ಬುಕ್ ಕಾಮೆಂಟ್ ಸೌಲಭ್ಯವನ್ನು ಕೂಡಲೇ ಮರುಸ್ಥಾಪಿಸಬೇಕು. ಜಿಲ್ಲಾಡಳಿತದ ಅಧಿಕೃತ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸಾರ್ವಜನಿಕರ ಅಭಿಪ್ರಾಯ ಹಾಗೂ ಪ್ರತಿಕ್ರಿಯೆಗಳಿಗೆ ಸೂಕ್ತ ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.




