ದೇವದುರ್ಗ ತಾಲ್ಲೂಕಿನ ರಾಮದುರ್ಗ ಗ್ರಾಮದ ಸರ್ಕಾರಿ ಪ್ರೌಢಶಾಲೆಯು ಶಿಥಿಲಗೊಂಡು ಮೇಲ್ಛಾವಣಿ ಕುಸಿದು ಬಿದ್ದಿರುವುದು ಶಾಲಾ ಮಕ್ಕಳಿಗೆ, ಶಿಕ್ಷಕರಿಗೆ ಹಾಗೂ ಪೋಷಕರಿಗೆ ಗಂಭೀರ ಆತಂಕ ಉಂಟು ಮಾಡಿದೆ. ಕೂಡಲೇ ಹೊಸ ಕಟ್ಟಡ ಮಂಜೂರು ಮಾಡಬೇಕು ಹಾಗೂ ನಿರ್ಮಿಸಬೇಕೆಂದು ಎಸ್ಎಫ್ಐ ವಿದ್ಯಾರ್ಥಿ ಯುವ ಮುಖಂಡ ಬಾಷಾ ಶ್ಯಾನೆರ ಆಗ್ರಹಿಸಿದರು.
ಶಿಥಿಲಗೊಂಡಿರುವ ಕಟ್ಟಡಗಳ ಮೇಲ್ಛಾವಣಿ, ಗೋಡೆಗಳು ಹಾಗೂ ಇತರ ಭಾಗಗಳು ಯಾವಾಗ ಕುಸಿಯುತ್ತವೆಯೋ ಎಂಬ ಆತಂಕ ಮಕ್ಕಳ ಪಾಲಕರಲ್ಲಿ ಮನೆಮಾಡಿದೆ. ಮಳೆಗಾಲದಲ್ಲಿ ಕಟ್ಟಡದ ಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ಮಕ್ಕಳ ಸುರಕ್ಷತೆ ಪ್ರಶ್ನೆಯಾಗಿದೆ ಎಂದರು.
ಈಗಾಗಲೇ ಶಾಲೆಯ ಚಾವಣಿ ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ಕೇವಲ ದುರಸ್ತಿ ಮಾಡುವ ಬದಲು, ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಹೊಸ ಶಾಲಾ ಕಟ್ಟಡ ನಿರ್ಮಿಸಬೇಕು ಹಾಗೂ ದೇವದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿರುವ ಹಳೆಯ ಹಾಗೂ ಶಿಥಿಲಗೊಂಡಿರುವ ಎಲ್ಲಾ ಸರ್ಕಾರಿ ಶಾಲಾ ಕಟ್ಟಡಗಳನ್ನು ಗುರುತಿಸಿ, ಅವುಗಳ ಸ್ಥಿತಿಗತಿಯನ್ನು ಪರಿಶೀಲಿಸಿ ಅಪಾಯಕಾರಿ ಸ್ಥಿತಿಯಲ್ಲಿರುವ ಶಾಲೆಗಳಿಗೆ ಹೊಸ ಕಟ್ಟಡಗಳನ್ನು ನಿರ್ಮಿಸಬೇಕು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಮಲ್ಲಾಪುರ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ ಅಸ್ವಸ್ಥ: ಆಸ್ಪತ್ರೆಗೆ ದಾಖಲು
ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ನಿರ್ಲಕ್ಷ್ಯ ವಹಿಸಿ, ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಶಾಲಾ ಮಂಡಳಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳೇ ನೇರ ಹೊಣೆಗಾರರಾಗಬೇಕಾಗುತ್ತದೆ ಎಂದು ಅವರು ಒತ್ತಾಯಿಸಿದರು.




