ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಅಮಾನತಗೊಂಡ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ ಇವರ ಸ್ವಗ್ರಾಮ ದೇವದುರ್ಗ ತಾಲ್ಲೂಕು ಹೇಮನಾಳ ಹಾಗೂ ಕೆಪಿಎಸ್ ಸಿ ನೇಮಕಾತಿ ಹೊಂದಿರುವ ಶಾವಂತಗೇರಾ ಗ್ರಾಮದ ಸೂಗೂರೇಶ ಎಂಬುವವರ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ ಇವರ ಅವಧಿಯಲ್ಲಿ ನೇಮಕಾತಿ ಹೊಂದಿದ ಪಶು ವೈದ್ಯಾಧಿಕಾರಿಗಳಾಗಿ ನೇಮಕವಾಗಿರುವ ಅಭ್ಯರ್ಥಿಗಳ ಬ್ಯಾಂಕ್ ವಹಿವಾಟು, ಇತರೆ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನಿಂದ ಆಗಮಿಸಿರುವ ಅಧಿಕಾರಿಗಳು ಶಿವಶಂಕರಪ್ಪ ಇವರಿಗೆ ಸೇರಿದ ಚಿರ ಮತ್ತು ಚರ ಆಸ್ತಿ ವಿವರಗಳನ್ನು ಸಹ ತಪಾಸಣೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಹಿರೇಹಳ್ಳದಲ್ಲಿ ಮರಳು ಅಕ್ರಮ ಗಣಿಗಾರಿಕೆ ತಡೆಗೆ ರೈತ ಸಂಘ ಆಗ್ರಹ
ಕುಟುಂಬ ವರ್ಗದವರ ಮಾಹಿತಿಯೂ ಸೇರಿದಂತೆ ಜಮೀನು, ಬ್ಯಾಂಕ್ ಖಾತೆಗಳ ಮಾಹಿತಿಯನ್ನು ಸಹ ಸಂಗ್ರಹಿಸಲಾಗಿದೆ ಎಂದು ಹೇಳಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿಯೂ ಪಶು ವೈಧ್ಯಾಧಿಕಾರಿಗಳಾಗಿ ನೇಮಕಗೊಂಡಿರುವ ಅಭ್ಯರ್ಥಿಗಳ ಮಾಹಿತಿ ಇಡಿ ಅಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.




