ಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ
ಒಡವೆ ಎಂದು ಅರಿಯಬೇಕು.
ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು.
ಈ ಎರಡರ ಉಭಯವ ಕಳೆದು ಸುಖಿ
ತಾನಾಗಬಲ್ಲಡೆ ನಾಸ್ತಿನಾಥನು ಪರಿಪೂರ್ಣನೆಂಬೆ.
ಶಿವಶರಣೆ ಧೂಪದ ಗೊಗ್ಗವ್ವೆ ಮೂಲತಃ ಕೇರಳದ ಆವಲೂರಿನವರು, ಪೋಷಕರು ಮದುವೆಗೆ ಒತ್ತಾಯಿಸಿದಾಗ ಅದನ್ನು ನಿರಾಕರಿಸಿ ವಿರಾಗಿಣಿಯಾಗಿ ಕಲ್ಯಾಣಕ್ಕೆ ಬಂದರು. ‘ಶರಣ ಸತಿ–ಲಿಂಗ ಪತಿ’ ಎಂಬ ಭಾವದಿಂದ ಲಿಂಗಾಂಗ ಸಾಮರಸ್ಯದ ಬದುಕನ್ನು ಅನುಭವಿಸಿದ ಗೊಗ್ಗವ್ವೆ, ತನ್ನ ವಚನಗಳಿಗೆ ‘ನಾಸ್ತಿನಾಥ’ ಎಂಬ ಅಂಕಿತನಾಮವನ್ನು ಬಳಸಿದ್ದು, ಒಟ್ಟು ಆರು ವಚನಗಳು ಮಾತ್ರ ಲಭ್ಯವಾಗಿವೆ. ನಾಸ್ತಿನಾಥನೇ ತನ್ನ ಸತಿಯಾಗಿ ಸ್ವೀಕರಿಸುವ ಮೂಲಕ ಸತಿ–ಪತಿ, ಗಂಡು-ಹೆಣ್ಣಿನ ಸಂಬಂಧಗಳ ಕುರಿತು ತನ್ನ ವಿಶಿಷ್ಟ ಅನುಭಾವವನ್ನು ವಚನಗಳ ಮೂಲಕ ಪ್ರಸ್ತುತಪಡಿಸಿದ್ದು ಕಾಣುತ್ತೇವೆ.
ಬಸವಪೂರ್ವ ಕಾಲದಲ್ಲಿ ಪುರೋಹಿತಶಾಹಿ ಮತ್ತು ರಾಜಶಕ್ತಿಯ ವ್ಯವಸ್ಥೆಯೊಳಗೆ ತಳವರ್ಗದವರು, ಕಾಯಕ ಜೀವಿಗಳು ಶೋಷಣೆ ಮತ್ತು ದೌರ್ಜನ್ಯಕ್ಕೆ ಒಳಗಾಗಿದರು, ಅವರ ಬದುಕು ಅಕ್ಷರಶಃ ದುರ್ಬರವಾಗಿತ್ತು. ಇಂತಹ ವಿಷಮ ಪರಿಸ್ಥಿತಿಯನ್ನು ಕಂಡ ಬಸವಣ್ಣ ಮನೆ ತೊರೆದು ಕಲ್ಯಾಣದ ಹಾದಿ ಹಿಡಿದು ಬಂದು, ಸಮಸಮಾಜ ಆಶಯಕ್ಕೆ ಮುನ್ನುಡಿ ಬರೆದರು. ಅನುಭವ ಮಂಟಪ ಮುಖಾಂತರ ಶರಣರು ಸಮಾಜದಲ್ಲಿ ಬೇರೂರಿದ ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆ ಹಾಗೂ ಮೌಢ್ಯಗಳ ವಿರುದ್ಧ ವಚನ ಮಾಧ್ಯಮ ಕೈಗೆತ್ತಿಕೊಂಡರು.
ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದ ಮೊದಲ ಮಹತ್ವದ ಸಾಮಾಜಿಕ ವೇದಿಕೆಗಳಲ್ಲಿ 12ನೇ ಶತಮಾನದ ಅನುಭವ ಮಂಟಪ ಎಂದು ಹೇಳಿದರೂ ತಪ್ಪಾಗಲಾರದು. ಬಸವಾದಿ ಪ್ರಮಥರ ಶರಣ ಸಂಕುಲದಲ್ಲಿ ಸ್ತ್ರೀ–ಪುರುಷ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶವಿತ್ತು. ಇನ್ನು ಸಮಾನತೆ ಸಮಾಜ ಪರಿಕಲ್ಪನೆಯ ಕೀರ್ತಿವಾರ್ತೆ ಎಲ್ಲೆಡೆ ಹರಡಿತು, ಹಾಗಾಗಿಯೇ ದೇಶ-ವಿದೇಶದಿಂದಲೂ ಶರಣರು ಕಲ್ಯಾಣದತ್ತ ಧಾವಿಸಿ ಬಂದರು. ಹೀಗಾಗಿಯೇ ಅಕ್ಕಮಹಾದೇವಿ, ಕೇತಲದೇವಿ, ಅಮುಗೆ ರಾಯಮ್ಮ, ಲಕ್ಕಮ್ಮ, ಸಂಕವ್ವೆ, ಕಾಳವ್ವೆ, ನೀಲಾಂಬಿಕೆ, ಸತ್ಯಕ್ಕ, ಗೊಗ್ಗವ್ವೆ, ಕೇತಲಾದೇವಿ ಸೇರಿ 35ಕ್ಕೂ ಅಧಿಕ ಮಹಿಳಾ ವಚನಕಾರ್ತಿಯರು ಅಸಮಾನತೆಯನ್ನು ತೀಕ್ಷವಾಗಿ ವಿರೋಧಿಸಿದರು.
12ನೇ ಶತಮಾನದ ಶಿವಶರಣೆಯರು ಕೇವಲ ಆಧ್ಯಾತ್ಮಿಕ ವಿಚಾರಗಳನ್ನಷ್ಟೇ ಪ್ರತಿಪಾದಿಸಲಿಲ್ಲ. ಲಿಂಗ ಅಸಮಾನತೆ, ಸ್ತ್ರೀ ಶೋಷಣೆ ಮತ್ತು ಪುರುಷ ಪ್ರಧಾನ ಮನೋಭಾವ ವಿರುದ್ಧ ಬಂಡಾಯದ ಕಹಳೆ ಊದಿದರು. ಸ್ತ್ರೀ, ಪುರುಷ ಉಭಯಪ್ರಧಾನ ಸಮಾಜಕ್ಕಾಗಿ ತಮ್ಮ ವಚನಗಳ ಮುಖಾಂತರ ಸಮಾಜವನ್ನು ಜಾಗೃತಗೊಳಿಸಿದರು. ಈ ಸಾಲಿಗೆ ಶರಣೆ ಧೂಪದ ಗೊಗ್ಗವ್ವೆಯವರ ವಚನಗಳು ವಿಶೇಷ ಮಹತ್ವ ಪಡೆದುಕೊಳ್ಳುತ್ತವೆ. ಕಲ್ಯಾಣದ ಅನುಭವ ಮಂಟಪದಲ್ಲಿ ಮೇಲು-ಕೀಳು, ಬಡವ-ಶ್ರೀಮಂತ, ಹೆಣ್ಣು-ಗಂಡು ಎಂಬ ಭೇದ-ಭಾವಕ್ಕೆ ಅವಕಾಶ ಇರಲಿಲ್ಲ. ಎಲ್ಲ ಶರಣರು ತಮ್ಮ ವೃತ್ತಿಯೊಂದಿಗೆ ವಾಸ್ತವ ಬದುಕಿನ ಅನುಭವಗಳನ್ನು ವಚನಸಾರ ಮುಖಾಂತರ ಹಂಚಿಕೊಂಡರು.
ʼಗಂಡು ಮೋಹಿಸಿ ಹೆಣ್ಣ ಹಿಡಿದಡೆ ಅದು ಒಬ್ಬರ ಒಡವೆ ಎಂದು ಅರಿಯಬೇಕುʼ ಎಂಬ ಸಾಲಿನ ಮೂಲಕ ಗೊಗ್ಗವ್ವೆ ಪುರುಷ ಪ್ರಧಾನ ಸಮಾಜದ ಮನೋಭಾವ ಪ್ರಶ್ನಿಸುತ್ತಾಳೆ. ಅನಾದಿಕಾಲದಿಂದಲೂ ಹೆಣ್ಣನ್ನು ಒಂದು ಒಡವೆಯೆಂಬ ರೀತಿಯಲ್ಲಿ ಕಾಣುವ ಸ್ಥಾಪಿತ ಸಮಾಜವನ್ನು ಧಿಕ್ಕರಿಸುತ್ತಾಳೆ. ಒಬ್ಬ ಪುರುಷ ತನ್ನ ಇಷ್ಟದ ಹೆಣ್ಣನ್ನು ಮೋಹಿಸಿ, ಆಕೆಯನ್ನು ತನ್ನ ಸ್ವಂತ ಆಸ್ತಿಯಂತೆ ಪರಿಗಣಿಸುವ ಸಾಮಾಜಿಕ ಮನಸ್ಥಿತಿ ಬಯಲಿಗೆಳೆಯುತ್ತಾಳೆ. ಅದಕ್ಕೆ ಪ್ರತಿಯಾಗಿ, “ಹೆಣ್ಣು ಮೋಹಿಸಿ ಗಂಡ ಹಿಡಿದಡೆ ಉತ್ತರವಾವುದೆಂದರಿಯಬೇಕು” ಎಂದು ಪ್ರಶ್ನಿಸುತ್ತಾಳೆ. ಪುರುಷನಿಗೆ ಇರುವ ಹಕ್ಕು, ಸ್ವಾತಂತ್ರ್ಯ ಮಹಿಳೆಗೂ ಇರಬೇಕಲ್ಲವೇ? ಪುರುಷ ಹೆಣ್ಣನ್ನು ತನ್ನ ಆಸ್ತಿ ಎಂದು ಪರಿಗಣಿಸುವುದಾದರೆ, ಹೆಣ್ಣಿಗೂ ಪುರುಷನ ಮೇಲೆ ಅದೇ ಹಕ್ಕು, ಸ್ವಾತಂತ್ರ್ಯ ಇರಬೇಕಲ್ಲವೇ? ಎಂಬ ತಾರ್ಕಿಕ ಪ್ರಶ್ನೆ ಮುಂದಿಡುತ್ತಾಳೆ.
ಇದು ಕೇವಲ ಗಂಡು-ಹೆಣ್ಣಿನ ಸಂಬಂಧದ ಕುರಿತು ಕೇಳಿದ ಪ್ರಶ್ನೆಯಲ್ಲ. ಇದರ ಹಿಂದೆ ಅಡಗಿರುವುದು ಸಮಾನತೆಯ ಮೂಲ ತತ್ವ. ಹೆಣ್ಣು ಯಾರೊಬ್ಬರ ಆಸ್ತಿಯಲ್ಲ. ಆಕೆಯೂ ಸ್ವತಂತ್ರ ವ್ಯಕ್ತಿತ್ವ ಹೊಂದಿರುವ ಮನುಷ್ಯಳು. ಆಕೆಗೆ ತನ್ನ ಬದುಕನ್ನು ನಿರ್ಧರಿಸುವ, ಪುರುಷನಂತೆ ಎಲ್ಲ ಸಮಾನ ಅವಕಾಶಗಳನ್ನು ಪಡೆದು, ಸ್ವಾವಲಂಬಿಯಾಗಿ ಬದುಕುವ ಹಕ್ಕಿದೆ. ಮೋಹಿಸುವ ಕ್ರಿಯೆ ಹೆಣ್ಣು ಮತ್ತು ಗಂಡು ಇಬ್ಬರಲ್ಲೂ ಸಮಾನವಾದದು ಎಂಬ ಒಳಸತ್ಯವನ್ನು ಗೊಗ್ಗವ್ವೆ ಪ್ರಕಟಿಸುತ್ತಾಳೆ.
ಗಂಡು-ಹೆಣ್ಣಿನ ಸಂಬಂಧದಲ್ಲಿ ಇರುವ ಅಸಮಾನತೆಯನ್ನು ಜೇಡರ ದಾಸಿಮಯ್ಯನವರ ವಚನಕ್ಕೆ ಪೂರಕವಾಗುವ ಶರಣೆ ಗೊಗ್ಗವ್ವೆಯ ವಚನವೊಂದು ಹೀಗಿದೆ.
ಮೊಲೆ ಮುಡಿ ಬಂದಡೆ ಹೆಣ್ಣೆಂಬರು.
ಮೀಸೆಕಾಸೆ ಬಂದಡೆ ಗಂಡೆಂಬರು
ಈ ಉಭಯದ ಜ್ಞಾನ ಹೆಣ್ಣೊ ಗಂಡೊ ನಾಸ್ತಿನಾಥಾ?
ದೈಹಿಕ ವ್ಯತ್ಯಾಸಗಳಿಂದಾಗಿ ಹೆಣ್ಣು ಗಂಡೆಂಬ ಭೇದವಿದೆಯೇ ಹೊರತು ಒಳಗಿನ ಆತ್ಮಕ್ಕಲ್ಲ. ಆತ್ಮಕ್ಕೆ ಲಿಂಗಭೇದವಿಲ್ಲ ಎಂದು ಸಾರಿದವರು ಶಿವಶರಣರು. ತೀರಾ ಸಾಧಾರಣವೆಂಬಂತೆ ‘ಮೊಲೆ ಮೂಡಿ ಬಂದಡೆ ಹೆಣ್ಣೆಂಬರು, ಮೀಸೆಕಾಸೆ ಬಂದಡೆ ಗಂಡೆಂಬರು, ಈ ಉಭಯದ ಜ್ಞಾನ ಹೆದ್ದೂ ಗಂಡೊ ನಾಸ್ತಿನಾಥ’ ಎಂದು ಗೊಗ್ಗವೆ ಜ್ಞಾನಕ್ಕೆ ಲಿಂಗಭೇದವಿಲ್ಲವೆನ್ನುತ್ತಾಳೆ. ಮನುಷ್ಯನ ಮೌಲ್ಯವನ್ನು ಆತನ ಲಿಂಗದಿಂದ ಅಳೆಯಬಾರದು ಎಂಬ ಶರಣರ ಮಾನವೀಯ ದೃಷ್ಟಿಕೋನ ಇಲ್ಲಿ ವ್ಯಕ್ತವಾಗುತ್ತದೆ.
ಶತಮಾನಗಳು ಕಳೆದರೂ ಗೊಗ್ಗವ್ವೆ ಪ್ರಶ್ನೆ ಇಂದಿಗೂ ಪ್ರಸ್ತುತವಾಗಿದೆ. ಮಹಿಳೆಯರು ಶಿಕ್ಷಣ, ಉದ್ಯೋಗ, ರಾಜಕೀಯ, ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೂ, ಗಂಡು-ಹೆಣ್ಣಿನ ನಡುವೆ ಇನ್ನೂ ತಾರತಮ್ಯ ಇದ್ದೇ ಇದೆ. ಮಹಿಳೆಗೆ ಇನ್ನೂ ಪುರುಷನ ಆಸ್ತಿ ಅಥವಾ ಅವಲಂಬಿತ ವ್ಯಕ್ತಿಯಂತೆ ನೋಡುವ ಮನೋಭಾವ ಸಂಪೂರ್ಣವಾಗಿ ದೂರವಾಗಿಲ್ಲ. ಸಾಮಾಜಿಕ ಅಸಮಾನತೆ ಅಷ್ಟೇ ಅಲ್ಲದೆ ರಾಜಕಾರಣದಲ್ಲಿಯೂ ಮಹಿಳೆಗೆ ಸಮಾನ ಸ್ಥಾನಮಾನಗಳು ದೊರೆಯದೇ ಇರುವುದು ವರ್ತಮಾನದಲ್ಲಿ ಪುರುಷ ಪ್ರಧಾನ ವ್ಯವಸ್ಥೆಗೆ ಸಾಕ್ಷಿ.
ಪ್ರಸ್ತುತ ಸಮಾಜಕ್ಕೆ ಗೊಗ್ಗವ್ವೆಯ ವಚನವು ಸಮಾಜದ ಮುಂದೆ ಕನ್ನಡಿ ಹಿಡಿಯುತ್ತದೆ. ಒಬ್ಬ ಪುರುಷನಿಗೆ ತನ್ನ ಬದುಕಿನ ಆಯ್ಕೆಯ ಹಕ್ಕು ಇರುವುದಾದರೆ, ಅದೇ ಹಕ್ಕು ಮಹಿಳೆಗೂ ಇರಬೇಕು. ಸಂಬಂಧಗಳು ಸ್ವಾಮ್ಯದಿಂದ ಅಲ್ಲ, ಪರಸ್ಪರ ಗೌರವ, ಸಮಾನತೆ ಮತ್ತು ಸ್ವಾತಂತ್ರ್ಯದ ನೆಲೆಯಲ್ಲಿ ರೂಪುಗೊಳ್ಳಬೇಕು ಎಂಬ ಸಂದೇಶವನ್ನು ಆಕೆಯ ವಚನ ಸಾರುತ್ತದೆ. ಶರಣರು ಡಂಭಾಚಾರ, ಜಾತೀಯತೆ, ಮೌಢ್ಯ ಹಾಗೂ ಲಿಂಗತಾರತಮ್ಯದಂತಹ ಸಾಮಾಜಿಕ ಸಮಸ್ಯೆಗಳನ್ನು ಪ್ರಶ್ನಿಸಿದರು. ವಚನಕಾರರ ಕಾಲಘಟ್ಟದಲ್ಲಿರುವ ಜಾತಿ, ಲಿಂಗ, ವರ್ಣ, ಮತ ಭೇಧ-ಭಾವ ವ್ಯವಸ್ಥೆ ಇಂದಿಗೂ ಮುಂದುವರೆದಿರುವುದು ವಿಪರ್ಯಾಸ. ಅದರ ನಿರ್ಮೂಲನೆಗೆ ವಚನತತ್ವ ಔಷಧವಾಗಿ ಬಳಸಬಹುದು.
ಧೂಪದ ಗೊಗ್ಗವ್ವೆ ವಚನದಲ್ಲಿರುವ ಸಾಮಾಜಿಕ ಕಳಕಳಿ, ಬಂಡಾಯ ಪ್ರಜ್ಞೆ ಇಂದಿನ ಸಮಾಜಕ್ಕೂ ಅತ್ಯಗತ್ಯ. ಮಹಿಳೆಯ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾದಾಗ ಆಕೆ ತನ್ನ ಹಕ್ಕಿಗಾಗಿ ಧ್ವನಿ ಎತ್ತಬೇಕು. ಅಸಮಾನತೆ ಎದುರಾದಾಗ ಸಮಾನತೆಯ ಪರವಾಗಿ ನಿಲ್ಲಬೇಕು. ಸ್ವಾವಲಂಬನೆ ಮತ್ತು ಆತ್ಮಗೌರವದ ಬದುಕು ಪ್ರತಿಯೊಬ್ಬ ಮಹಿಳೆಯ ಹಕ್ಕು ಎಂಬ ಅರಿವು ಸಮಾಜದಲ್ಲಿ ಗಟ್ಟಿಯಾಗಬೇಕು. ವರ್ಗ, ವರ್ಣ, ಜಾತಿ, ಮತ, ಪಂಥ, ಲಿಂಗ ಸಮಾನತೆ ನೆಲೆಗೊಳ್ಳಬೇಕಾದರೆ ಸಮಾಜದಲ್ಲಿ ಸಮಾನತೆ ಭಾವ ಮೂಡಬೇಕು. ಅದು ವೈಚಾರಿಕ, ವೈಜ್ಞಾನಿಕ ಚಿಂತನೆಯಿಂದ ಮಾತ್ರ ಸಾಧ್ಯ ಎಂಬುದು ಶರಣರು ಒತ್ತಿ ಹೇಳಿದರು.

ಗಂಡು-ಹೆಣ್ಣು ಎಂಬ ಭೇದದ ಆಚೆಗೆ ಮಾನವೀಯತೆ ಕಾಣುವ ಶರಣರ ದೃಷ್ಟಿಕೋನ ಧೂಪದ ಗೊಗ್ಗವ್ವೆ ವಚನದ ಅಂತಃಸತ್ವ. ಕೊನೆಗೆ ಗಂಡು-ಹೆಣ್ಣಿನ ಉಭಯ ಭೇದಗಳನ್ನು ಮೀರಿ “ನಾಸ್ತಿನಾಥನು ಪರಿಪೂರ್ಣ” ಎಂಬ ಭಾವವನ್ನು ವ್ಯಕ್ತಪಡಿಸುವ ಗೊಗ್ಗವ್ವೆ, ‘ಶರಣ ಸತಿ-ಲಿಂಗ ಪತಿ’ ಎಂಬ ಅನುಭಾವದ ಮೂಲಕ ಲಿಂಗಸಾಮರಸ್ಯದ ಉನ್ನತ ತತ್ವ ಸಾರುತ್ತಾಳೆ. ಧೂಪದ ಗೊಗ್ಗವ್ವೆ ವಚನವು ಕೇವಲ ಸ್ತ್ರೀಪರ ಚಿಂತನೆಯ ದಾಖಲೆಯಲ್ಲ; ಅದು ಸ್ವಾತಂತ್ರ್ಯ, ಸಮಾನತೆ, ಆತ್ಮಗೌರವ ಮತ್ತು ಮಾನವೀಯ ಸಂಬಂಧಗಳ ಪರವಾದ ಹನ್ನೆರಡನೇ ಶತಮಾನದ ಬಂಡಾಯದ ಧ್ವನಿ. ಆ ಧ್ವನಿ ಇಂದಿಗೂ ನಮ್ಮ ಸಮಾಜವನ್ನು ಪ್ರಶ್ನಿಸುತ್ತಲೇ ಇದೆ.
ಗೊಗ್ಗವೆ ಶಿವಭಕ್ತರಿಗೆ ಧೂಪ ಅರ್ಪಿಸುವ ಕಾಯಕ ಮಾಡುತ್ತಿದ್ದ ಕಾರಣಕ್ಕೆ ಧೂಪದ ಗೊಗ್ಗವ್ವೆ ಎಂದು ಪ್ರಸಿದ್ಧಳಾಗಿದ್ದಾಳೆ. ವಚನ ಸಿದ್ಧಾಂತ ಒಪ್ಪದ ಪಟ್ಟಭದ್ರ ಹಿತಾಶಕ್ತಿಗಳು ಅಂದು ಶರಣರ ಕಗ್ಗೊಲೆ ಮಾಡಿˌ ವಚನಕಟ್ಟುಗಳನ್ನು ಸುಟ್ಟರು, ಅದಾದ ಬಳಿಕ ಶರಣರು ಕಲ್ಯಾಣ ತೊರೆದು ನಾನಾ ಕಡೆ ಹೋಗಬೇಕಾಯಿತು. ಆ ವೇಳೆ ಧೂಪದ ಗೊಗ್ಗವ್ವೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಧೂಪದ ಮಹಾಗಾಂವ ಗ್ರಾಮದ ಕಡೆಗೆ ತೆರಳಿ ಅಲ್ಲಿಯೇ ನೆಲೆಸಿ ಧೂಪದ ಕಾಯಕ ಕೈಗೊಂಡು ಐಕ್ಯ ಆಗಿದ್ದಾಳೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುವ ಅಗತ್ಯವಿದೆ.
ಬೀದರ್ ಜಿಲ್ಲಾ ಕೇಂದ್ರದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಧೂಪತಮಹಾಗಾಂವ್ ಗ್ರಾಮವು ಗೊಗ್ಗವ್ವೆ ನೆಲೆಸಿರುವ ಕಾರಣಕ್ಕೆ ಐತಿಹಾಸಿಕ ಗ್ರಾಮವಾಗಿ ಕಾಣುತ್ತದೆ. ಈ ಹಿಂದೆ ʼಮಹಾಗಾಂವ್ʼ ಹೆಸರಿನೊಂದಿಗೆ ʼಧೂಪದʼ ಪದ ಸೇರಿಕೊಂಡು ಧೂಪದಮಹಾಗಾಂವ್ ಅಥವಾ ಧೂಪತಮಹಾಗಾಂವ್ ಎಂದು ಬಳಕೆಯಲ್ಲಿ ಬಂದಿರುವುದು ದಾಖಲೆಗಳಿಂದ ತಿಳಿದುಬರುತ್ತದೆ. ಧೂಪದ ಗೊಗ್ಗವ್ವೆ ಐಕ್ಯವಾದ ಗ್ರಾಮದ ಹೊರವಲಯದಲ್ಲಿ ಚಿಕ್ಕ ದೇವಾಲಯ ನಿರ್ಮಿಸಲಾಗಿದ್ದು, ಮಂದಿರ ಪಕ್ಕದಲ್ಲಿಯೇ ಸಣ್ಣ ಕೆರೆ ಒಂದಿದೆ.
ಇದನ್ನೂ ಓದಿ : ವಚನ ಕಲ್ಯಾಣ | ಆಸೆಯೆಂಬುದು ಅರಸಿಂಗಲ್ಲದೆ, ಶಿವಭಕ್ತರಿಗುಂಟೆ ಅಯ್ಯಾ?
ಹಿಂದಿನ ಕಾಲದಿಂದಲೂ ಆ ಕೆರೆಗೆ ಗೊಗ್ಗವ್ವೆ ಕೆರೆ ಎಂದೇ ಕರೆಯುತ್ತಾರೆ. ಈಚೆಗೆ ಗ್ರಾಮ ಪಂಚಾಯತ್ ನೇತ್ರತ್ವದಲ್ಲಿ ಕೆರೆ ಅಭಿವೃದ್ಧಿಪಡಿಸಿ, ಮಂದಿರ ಆವರಣದಲ್ಲಿ ಉದ್ಯಾವನ, ಕಾಂಪೌಂಡ ನಿರ್ಮಿಸಲಾಗಿದೆ. ಊರಿನಲ್ಲಿ ಯಾವುದೇ ಸಭೆ, ಸಮಾರಂಭ, ಮದುವೆ ಅಂತಹ ಕಾರ್ಯಗಳಲ್ಲಿ ಮೊದಲು ಗೊಗ್ಗವ್ವೆಗೆ ಪೂಜೆ ಸಲ್ಲಿಸುವುದು, ಪ್ರತಿವರ್ಷ ಜಾತ್ರೆ ನಡೆಯುವುದು ಈಗಲೂ ವಾಡಿಕೆಯಾಗಿದೆ. ಸರ್ಕಾರ ವಿಶೇಷ ಅನುದಾನ ಒದಗಿಸಿ ವಚನಕಾರ್ತಿ ಧೂಪದ ಗೊಗ್ಗವ್ವೆ ಸ್ಮಾರಕ ಇನ್ನಷ್ಟು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ಗ್ರಾಮಸ್ಥರ ಬೇಡಿಕೆಗೆ ಜನಪ್ರತಿನಿಧಿಗಳು ಸ್ಪಂದಿಸಬೇಕಿದೆ.
(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.



