ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಹಾಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ. ರಾಮಲದಿನ್ನಿ ಗ್ರಾಮದಲ್ಲಿ ಬಿಸಿಯೂಟ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವಿನ ವೈಯಕ್ತಿಕ ಕಲಹದ ಪರಿಣಾಮವಾಗಿ ಕಳೆದ 12 ದಿನಗಳಿಂದ ಮಕ್ಕಳು ಶಾಲೆಗೆ ಹಾಜರಾಗದಿರುವ ಘಟನೆ ಬೆಳಕಿಗೆ ಬಂದಿದೆ.
ಎಂ. ರಾಮಲದಿನ್ನಿ ಗ್ರಾಮದಲ್ಲಿ ಶಾಲೆಗಳು ಆರಂಭವಾಗಿ 12 ದಿನಗಳು ಕಳೆದಿದ್ದರೂ, ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಪಾಲಕರು ತಮ್ಮ ಮಕ್ಕಳನ್ನು ಕಳುಹಿಸದೆ ಬಹಿಷ್ಕಾರ ಹಾಕಿರುವುದರಿಂದ ಶಾಲೆ ಸಂಪೂರ್ಣ ಬಿಕೋ ಎನ್ನುತ್ತಿದೆ. ವೈಯಕ್ತಿಕ ದ್ವೇಷ ಮತ್ತು ಕುಟುಂಬಗಳ ನಡುವಿನ ಭಿನ್ನಾಭಿಪ್ರಾಯದ ಪರಿಣಾಮವಾಗಿ ಮಕ್ಕಳ ಶಿಕ್ಷಣವೇ ಸಂಕಷ್ಟಕ್ಕೆ ಸಿಲುಕಿದೆ.
ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಅಡುಗೆ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶಂಕ್ರಮ್ಮ ಹಾಗೂ ಅವರ ಕುಟುಂಬದ ಸದಸ್ಯರೊಂದಿಗೆ ಗ್ರಾಮಸ್ಥರಿಗೆ ಕಳೆದ ಕೆಲವು ದಿನಗಳಿಂದ ವೈಯಕ್ತಿಕ ಜಗಳ ಮತ್ತು ಭಿನ್ನಾಭಿಪ್ರಾಯ ಉಂಟಾಗಿತ್ತು, ಈ ವಿವಾದ ದಿನದಿಂದ ದಿನಕ್ಕೆ ತೀವ್ರಗೊಂಡಿದ್ದು, ಅದರ ಪರಿಣಾಮ ಶಾಲೆಯ ಮೇಲೆಯೂ ಬಿದ್ದಿದೆ ಎನ್ನಲಾಗಿದೆ.
ಅಡುಗೆ ಸಿಬ್ಬಂದಿ ಹಾಗೂ ಗ್ರಾಮಸ್ಥರ ನಡುವೆ ವೈಯಕ್ತಿಕ ದ್ವೇಷದ ವಾತಾವರಣದಲ್ಲಿ ಶಾಲಾ ಮಕ್ಕಳಿಗೆ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪಾಲಕರ ಅಭಿಪ್ರಾಯವಾಗಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಜೋಳ ಖರೀದಿ ಹಣ ಪಾವತಿಗೆ ಆಗ್ರಹಿಸಿ ರಸ್ತೆ ತಡೆದು ರೈತರು ಪ್ರತಿಭಟನೆ
ವಿಷಯ ತಿಳಿದ ಬಳಿಕ ಅಕ್ಷರ ದಾಸೋಹ ತಾಲ್ಲೂಕು ಅಧಿಕಾರಿ ಕುಬೇರಪ್ಪ ಹಾಗೂ ಹಾಲಾಪುರ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಸುಭಾಷ್ ಸಿಂಗ್ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು ಸಭೆ ವಿಫಲವಾಗಿದೆ.
ಶಂಕ್ರಮ್ಮ ಪರಿಶಿಷ್ಟ ಜಾತಿಯ ಛಲವಾದಿ ಸಮುದಾಯಕ್ಕೆ ಸೇರಿದ್ದು, ಛಲವಾದಿ ಸಮುದಾಯ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಕೆಲ ಮುಖಂಡರ ನಡುವೆ ಜಗಳ ನಡೆದಿತ್ತು. ಮಕ್ಕಳ ಪಾಲಕರು ಬಹುತೇಕ ಎಸ್‌ಟಿ ಸಮುದಾಯಕ್ಕೆ ಸೇರಿದ್ದು, ಬಿಸಿಯೂಟ ತಯಾರಿಸುವ ಶಂಕ್ರಮ್ಮ ಅವರ ಮೇಲೆ ಅನುಮಾನದಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿಲ್ಲ. ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.




